ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಿಸಲು ಕ್ರಮಕ್ಕೆ ಅಧಿಕಾರಿಗಳಿಗೆ ಚುನಾವಣಾ ಆಯೋಗ ನಿರ್ದೇಶನ

Update: 2025-03-12 20:08 IST
Election Commission

PC : PTI 

  • whatsapp icon

ಹೊಸದಿಲ್ಲಿ: ಮತದಾರರ ಪಟ್ಟಿಯ ಅಂಕಿಅಂಶಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ಜೋಡಿಸಲು ಎಲ್ಲಾ ಪ್ರಯತ್ನಗಳನ್ನು ನಡೆಸುವಂತೆ ಭಾರತೀಯ ಚುನಾವಣಾ ಆಯೋಗವು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಇದಕ್ಕೆ ಸಬಂಧಿಸಿದ ಸುತ್ತೋಲೆಗಳನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕಳುಹಿಸಲಾಗಿದೆ.

‘‘ಮಾರ್ಚ್ 4ರಂದು ನಡೆದ ಮುಖ್ಯ ಚುನಾವಣಾಧಿಕಾರಿಗಳ ಸಮ್ಮೇಳನದಲ್ಲಿ ಮುಖ್ಯ ಚುನಾವಣಾ ಆಯುಕ್ತರ ಆರಂಭಿಕ ಮಾತುಗಳು’’ ಎಂಬ ದಾಖಲೆಯಲ್ಲಿ ಈ ನಿರ್ದೇಶನಗಳನ್ನು ನೀಡಲಾಗಿದೆ. ಈ ದಾಖಲೆಯನ್ನು ಬಳಿಕ ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ವಿತರಿಸಲಾಯಿತು. ಅದನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೂ ಕಳುಹಿಸುವಂತೆ ಅವರಿಗೆ ಸೂಚಿಸಲಾಗಿದೆ.

‘‘ಮತದಾರರ ಸರಿಯಾದ ಗುರುತನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಮತ್ತು ಅವರೊಂದಿಗೆ ಅಗತ್ಯ ಸಂಪರ್ಕವನ್ನು ಹೊಂದುವುದಕ್ಕಾಗಿ ಮತದಾರರ ವಿವರಗಳನ್ನು ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳೊಂದಿಗೆ ಜೋಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು’’ ಎಂಬುದಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಚುನಾವಣೆಗಳನ್ನು ‘‘ದೇಶಸೇವೆಯ ಮೊದಲ ಹೆಜ್ಜೆ’’ ಎಂಬುದಾಗಿ ಬಣ್ಣಿಸಿರುವ ಜ್ಞಾನೇಶ್ ಕುಮಾರ್, ತನ್ನ ಸಾಂವಿಧಾನಿಕ ಬದ್ಧತೆಗಳನ್ನು ಈಡೇರಿಸಲು ಭಾರತೀಯ ಚುನಾವಣಾ ಆಯೋಗವು ಎಲ್ಲಾ ಪ್ರಯತ್ನಗಳನ್ನು ಮಾಡುವುದು ಎಂದು ಹೇಳಿದ್ದಾರೆ.

ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳೊಂದಿಗಿನ ನಿಕಟ ಸಮನ್ವಯದೊಂದಿಗೆ ನಿಯಮಿತವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘‘ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ-ಮನೆ ಸಮೀಕ್ಷೆಗಳನ್ನು ನಡೆಸಿ, ಸಂವಿಧಾನಕ್ಕೆ ಅನುಗುಣವಾಗಿ 18 ವರ್ಷ ತುಂಬಿದ ಎಲ್ಲಾ ಭಾರತೀಯ ಪ್ರಜೆಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸುವಂತೆ ಖಚಿತಪಡಿಸಿಕೊಳ್ಳಬೇಕು’’ ಎಂಬ ನಿರ್ದೇಶನವನ್ನೂ ಅವರು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News