ಹಿಂಸಾಚಾರ ತಡೆಯಲು ಚುನಾವಣಾ ಆಯೋಗದ ಕ್ರಮಗಳು ಪರಿಣಾಮಕಾರಿಯಾಗಿರಲಿಲ್ಲ: ಕಲ್ಕತ್ತಾ ಹೈಕೋರ್ಟ್

Update: 2023-07-12 16:12 GMT

ಕಲ್ಕತ್ತಾ ಹೈಕೋರ್ಟ್ | Photo: PTI

ಕೋಲ್ಕತ: ಜುಲೈ 8ರಂದು ನಡೆದ ಪಂಚಾಯತ್ ಮತದಾನದ ವೇಳೆ ನಡೆದ ಹಿಂಸಾಚಾರವನ್ನು ತಡೆಯುವಲ್ಲಿ ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಕ್ರಮಗಳು ಪರಿಣಾಮಕಾರಿಯಾಗಿರಲಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಬುಧವಾರ ಹೇಳಿದೆ.

ಮತದಾನ ದಿನದಂದು ನಡೆದ ಹಿಂಸಾಚಾರ ಮತ್ತು ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಹಲವರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಟಿ.ಎಸ್. ಶಿವಜ್ಞಾನಮ್ ಮತ್ತು ನ್ಯಾಯಾಧೀಶ ಹಿರಣ್ಮಯ್ ಭಟ್ಟಾಚಾರ್ಯ ಅವರನ್ನೊಳಗೊಂಡ ವಿಭಾಗ ಪೀಠವೊಂದು ಈ ಅಭಿಪ್ರಾಯ ವ್ಯಕ್ತಪಡಿಸಿತು.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸಂಬಂಧಿ ಹಿಂಸಾಚಾರದಲ್ಲಿ ಸೋಮವಾರದವರೆಗೆ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ಮತಪೆಟ್ಟಿಗೆಗಳನ್ನು ದೋಚಲಾಗಿದೆ, ನಾಶಪಡಿಸಲಾಗಿದೆ ಮತ್ತು ಕೆಲವು ಸ್ಥಳಗಳಲ್ಲಿ ಮತದಾರರನ್ನು ಬೆದರಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಸೋಮವಾರ 696 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಾಗಿದೆ. ಆ ಮತಗಟ್ಟೆಗಳಲ್ಲಿ ಹಿಂಸಾಚಾರದಿಂದಾಗಿ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.

ಕೇವಲ 696 ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವ ನಿರ್ಧಾರವನ್ನು ಯಾವ ಆಧಾರದಲ್ಲಿ ತೆಗೆದುಕೊಂಡಿರಿ ಎಂದು ಬುಧವಾರ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗವನ್ನು ಪ್ರಶ್ನಿಸಿತು. ಓರ್ವ ಅರ್ಜಿದಾರರು ಹೇಳಿರುವಂತೆ, ಎಲ್ಲಾ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವ ಅಗತ್ಯವಿದೆಯೇ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಆಯೋಗವು ಮಾಡಿದೆಯೇ ಎನ್ನುವುದನ್ನೂ ಹೈಕೋರ್ಟ್ ತಿಳಿಯಬಯಸಿತು.

‘‘ಫಲಿತಾಂಶ ಪ್ರಕಟನೆಯ ಬಳಿಕವೂ, ಹಿಂಸಾಚಾರವನ್ನು ನಿಯಂತ್ರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ. ನಾಗರಿಕರ ಸ್ವಾತಂತ್ರವನ್ನು ಮೊಟಕುಗೊಳಿಸಲಾಗಿದೆ ಮತ್ತು ಪೊಲೀಸರು ಅಮಾಯಕ ನಾಗರಿಕರಿಗೆ ಸಹಾಯ ಮಾಡುತ್ತಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ’’ ಎಂದು ಹೈಕೋರ್ಟ್ ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News