ಜೂ.24ರಿಂದ 8 ದಿನಗಳ ವಿಶೇಷ ಸಂಸತ್ ಅಧಿವೇಶನದಲ್ಲಿ ಸ್ಪೀಕರ್ ಆಯ್ಕೆ

Update: 2024-06-11 16:13 GMT

ಸಾಂದರ್ಭಿಕ ಚಿತ್ರ | PTI

 

ಹೊಸದಿಲ್ಲಿ: ಎಂಟು ದಿನಗಳ ವಿಶೇಷ ಸಂಸತ್ ಅಧಿವೇಶನ ಜೂ.24ರಿಂದ ಆರಂಭಗೊಳ್ಳಲಿದ್ದು,ಜೂ.26ರಂದು ಲೋಕಸಭಾ ಸ್ಪೀಕರ್ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ಮಂಗಳವಾರ ತಿಳಿಸಿವೆ.

ಜೂ.24 ಮತ್ತು 25ರಂದು ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಶೇಷ ಅಧಿವೇಶನದಲ್ಲಿ ನೂತನ ಲೋಕಸಭಾ ಸ್ಪೀಕರ್ ಆಗಿ ಎನ್ಡಿಎ ಅಭ್ಯರ್ಥಿಯ ಆಯ್ಕೆ ಬಿಜೆಪಿಯ ಅಜೆಂಡಾದಲ್ಲಿ ಪ್ರಮುಖವಾಗಿದೆ ಎಂದು ಮೂಲಗಳು ತಿಳಿಸಿದವು.

ಎನ್ಡಿಎ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಎರಡೂ ಸ್ಪೀಕರ್ ಕುರ್ಚಿಯ ಮೇಲೆ ಕಣ್ಣಿಟ್ಟಿರುವುದರಿಂದ ಈ ಹುದ್ದೆಯು ಈಗ ಮತ್ತೊಮ್ಮೆ ಜನರ ಗಮನವನ್ನು ಸೆಳೆದಿದೆ.

ಇತ್ತೀಚಿಗೆ ಅಂತ್ಯಗೊಂಡ ಲೋಕಸಭಾ ಚುನಾವಣೆಯಲ್ಲಿ ಕೇವಲ 240 ಸ್ಥಾನಗಳನ್ನು ಗಳಿಸಲು ಬಿಜೆಪಿಗೆ ಸಾಧ್ಯವಾಗಿದೆ. ಬಹುಮತಕ್ಕಾಗಿ ಅದು ಮಿತ್ರಪಕ್ಷಗಳನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿಯಿದೆ. ಇದು ಕಳೆದ ಕೆಲವು ವರ್ಷಗಳಲ್ಲಿ ಇತರ ಪಕ್ಷಗಳನ್ನು ವಿಭಜಿಸುವಲ್ಲಿ ಮತ್ತು ಸರಕಾರಗಳನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಬಿಜೆಪಿ ಪಾಳಯದೊಳಗೆ ಆಂತರಿಕ ಬಂಡಾಯದ ಭೀತಿಗೆ ಕಾರಣವಾಗಿದೆ. ಅಂತಹ ಸನ್ನಿವೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯು ಮುನ್ನೆಲೆಗೆ ಬರುತ್ತದೆ. ಹೀಗಾಗಿ ಸ್ಪೀಕರ್ ಹುದ್ದೆಯು ಮಹತ್ವವನ್ನು ಪಡೆದುಕೊಳ್ಳುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News