ನಾಳೆ ಮಹಾರಾಷ್ಟ್ರ ಜಾರ್ಖಂಡ್ ಚುನಾವಣಾ ಫಲಿತಾಂಶ ಪ್ರಕಟ
ಹೊಸದಿಲ್ಲಿ : ಶನಿವಾರ ಫಲಿತಾಂಶಗಳ ಘೋಷಣೆಯೊಂದಿಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಕದನ ಕುತೂಹಲಕ್ಕೆ ಅಂತಿಮ ತೆರೆ ಬೀಳಲಿದೆ.
ಎರಡೂ ರಾಜ್ಯಗಳು ನಿಕಟ ಹಣಾಹಣಿಗೆ ಸಾಕ್ಷಿಯಾಗಿದ್ದವು,ಮಾತ್ರವಲ್ಲ 15 ರಾಜ್ಯಗಳಲ್ಲಿಯ ಉಪಚುನಾವಣೆಗಳ ಫಲಿತಾಂಶಗಳೂ ಶನಿವಾರ ಪ್ರಕಟಗೊಳ್ಳಲಿವೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನ.13 ಮತ್ತು 20ರಂದು ಎರಡು ಹಂತಗಳಲ್ಲಿ ನಡೆದಿದ್ದರೆ 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನ.20ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಶನಿವಾರ ಮತಗಳ ಎಣಿಕೆಯೊಂದಿಗೆ ಕಣದಲ್ಲಿದ್ದ ರಾಜಕೀಯ ನಾಯಕರ ಹಣೆಬರಹ ನಿರ್ಧಾರವಾಗಲಿದೆ.
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ 15 ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳು ಮತ್ತು ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶಗಳೂ ಶನಿವಾರವೇ ಪ್ರಕಟಗೊಳ್ಳಲಿವೆ.
ಉತ್ತರ ಪ್ರದೇಶ ಉಪಚುನಾವಣೆಗಳ ಫಲಿತಾಂಶವು 2027ರಲ್ಲಿ ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಗೆ ರಂಗ ಸಜ್ಜಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ.