ಲಡಾಖ್ ಪರ್ವತ ಮಂಡಳಿಗೆ ಅಕ್ಟೋಬರ್ 4ರಂದು ಚುನಾವಣೆ

Update: 2023-09-08 18:11 GMT

ಸಾಂದರ್ಭಿಕ ಚಿತ್ರ.| Photo: PTI

ಲೇಹ್: ಲಡಾಖ್ ಸ್ವಾಯತ್ತ ಪರ್ವತ ಅಭಿವೃದ್ಧಿ ಮಂಡಳಿ-ಕಾರ್ಗಿಲ್ (ಎಲ್‌ಎಎಚ್‌ಎಡಿಸಿ-ಕೆ)ಗೆ ಅಕ್ಟೋಬರ್ 4ರಂದು ಚುನಾವಣೆ ನಡೆಯಲಿದ್ದು, ಈ ಬಗ್ಗೆ ಲಡಾಕ್‌ನ ಕೇಂದ್ರಾಡಳಿತವು ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ನ್ಯಾಶನಲ್‌ ಕಾನ್ಫರೆನ್ಸ್ ಪಕ್ಷಕ್ಕೆ ಅದರ ನೇಗಿಲು ಚಿಹ್ನೆಯನ್ನು ಉಳಿಸಿಕೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಎರಡು ದಿನಗಳ ಆನಂತರ ಚುನಾವಣಾ ದಿನಾಂಕ ಘೋಷಣೆಯಾಗಿದೆ.

ಎಲ್‌ಎಎಚ್‌ಡಿಸಿ-ಕೆ ಚುನಾವಣೆಯು ಸೆಪ್ಟೆಂಬರ್ 10ರಂದು ನಡೆಯುವುದೆಂದು ಈ ಮೊದಲು ನಿಗದಿಯಾಗಿತ್ತು. ಆದರೆ ಲಡಾಕ್‌ನ ಕೇಂದ್ರಾಡಳಿತವು ನ್ಯಾಶನಲ್ ಕಾನ್ಫರೆನ್ಸ್ ಪಕ್ಷಕ್ಕೆ ಅದರ ಚುನಾವಣಾ ಚಿಹ್ನೆಯಾದ ನೇಗಿಲನ್ನು ನೀಡಲು ನಿರಾಕರಿಸಿದ್ದರಿಂದ, ಆಗಸ್ಟ್ ತಿಂಗಳ ಮೊದಲ ವಾರದಿಂದ ಸುದೀರ್ಘ ಕೇಂದ್ರಾಡಳಿತ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ನಡುವೆ ಕಾನೂನು ಸಮರಕ್ಕೆ ಕಾರಣವಾಯಿತು.

ಲಡಾಕ್ ಕೇಂದ್ರಾಡಳಿತ ಪ್ರದೇಶವು ಚುನಾವಣಾ ಪ್ರಾಧಿಕಾರವನ್ನು ಹೊಂದಿದೆ. ಆದರೆ ಈ ಚುನಾವಣಾ ಚಿಹ್ನೆಗಳ ವಿಷಯದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕನ್ನು ಇರುವ ರಾಜ್ಯ ಚುನಾವಣಾ ಆಯೋಗವನ್ನು ಅದು ಹೊಂದಿಲ್ಲವೆಂದು ಕೇಂದ್ರಾಡಳಿತವು ವಾದಿಸಿತ್ತು. ಆದರೆ ನ್ಯಾಶನಲ್ ಕಾನ್ಫರೆನ್ಸ್ ಪಕ್ಷವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಹವಾಲಿನಲ್ಲಿ, 2020ರ ಎಲ್‌ಎಎಚ್‌ಡಿಸಿ-ಲೇಹ್ ಚುನಾವಣೆಯಲ್ಲಿ ಇದೇ ಚುನಾವಣಾ ಪ್ರಾಧಿಕಾರವು ಆಮ್ ಆದ್ಮಿ ಪಕ್ಷವು ಚುನಾವಣಾ ಚಿಹ್ನೆಯನ್ನು ನೀಡಿತ್ತು ಎಂದು ವಾದಿಸಿತ್ತು.

2019ರಲ್ಲಿ ಕೇಂದ್ರ ಸರಕಾರವು ಜಮ್ಮು ಕಾಶ್ಮೀರದಿಂದ ಲಡಾಕ್‌ನ್ನು ಪ್ರತ್ಯೇಕಿಸಿ ಅದಕ್ಕೆ ಕೇಂದ್ರಾಡಳಿತದ ಸ್ಥಾನಮಾನ ನೀಡಿತ್ತು. ಜಮ್ಮು ಕಾಶ್ಮೀರವು ಕೂಡಾ ಕೇಂದ್ರಾಡಳಿತವಾಗಿದ್ದರೂ, ವಿಧಾನಸಭೆಯನ್ನು ಹೊಂದಿರುತ್ತದೆ. ಆದರೆ ಲಡಾಖ್ ವಿಧಾನಸಭೆಯನ್ನು ಹೊಂದಿಲ್ಲ. ಸ್ಥಳೀಯ ಆಡಳಿತ ವಿಷಯಗಳಿಗಾಗಿ ಕಾರ್ಗಿಲ್ ಹಾಗೂ ಲೇಹ್ ಜಿಲ್ಲೆಗಳಲ್ಲಿ ಎರಡು ಪರ್ವತ ಮಂಡಳಿಗಳನ್ನು ಉಳಿಸಿಕೊಳ್ಳಲು ಕೇಂದ್ರ ಸರಕಾರವು ಅನುಮತಿ ನೀಡಿದೆ.

ಎಲ್‌ಎಎಚ್‌ಡಿಸಿ-ಕೆ ಚುನಾವಣೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಜೊತೆಯಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಎಲ್‌ಎಎಚ್‌ಡಿಸಿ ಮಂಡಳಿಗೆ ಒಟ್ಟು 26 ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News