ಚುನಾವಣಾ ಬಾಂಡ್ ಹಗರಣ | ಎಸ್ ಐ ಟಿ ತನಿಖೆ ಕೋರಿದ ಪಿಐಎಲ್ ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ಹೊಸದಿಲ್ಲಿ : ಚುನಾವಣಾ ಬಾಂಡ್ ಯೋಜನೆ ಕುರಿತು ನ್ಯಾಯಾಲಯ ಮೇಲ್ವಿಚಾರಣೆಯ ತನಿಖೆ ಆಗ್ರಹಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ.
ರಾಜಕೀಯ ಪಕ್ಷ, ಕಾರ್ಪೋರೇಟ್ ಸಂಸ್ಥೆ ಹಾಗೂ ತನಿಖಾ ಏಜೆನ್ಸಿಗಳ ನಡುವಿನ ಕೊಡು-ಕೊಳ್ಳುವಿಕೆ ಆರೋಪಿಸಿ ಸರಕಾರೇತರ ಸಂಸ್ಥೆ ‘ಕಾಮನ್ ಕಾಸ್ ಆ್ಯಂಡ್ ದ ಸೆಂಟರ್ ಫಾರ್ ಪಬ್ಲಿಕ್ ಇಂಟ್ರೆಸ್ಟ್ ಲಿಟಿಗೇಶನ್ (ಸಿಪಿಐಎಲ್)’ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಸರಕಾರೇತರ ಸಂಸ್ಥೆಯ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ, ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಗಮನಕ್ಕೆ ತೆಗೆದುಕೊಂಡಿತು. ಪ್ರಶಾಂತ್ ಭೂಷಣ್ ಕಳೆದ ಕೆಲವು ತಿಂಗಳಿಂದ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಗೆ ಹಲವು ಬಾರಿ ಭೇಟಿ ನೀಡಿದ ಹೊರತಾಗಿಯೂ ಅರ್ಜಿಯನ್ನು ಇನ್ನಷ್ಟೆ ಪಟ್ಟಿ ಮಾಡಬೇಕಾಗಿದೆ.
‘‘ದಯವಿಟ್ಟು ಇಂದೇ ಇಮೇಲ್ ಕಳುಹಿಸಿ. ಅದನ್ನು ಪಟ್ಟಿ ಮಾಡಲಾಗುವುದು’’ ಎಂದು ಚಂದ್ರಚೂಡ್ ಅವರು ಹೇಳಿದರು. ಅದಕ್ಕೆ ಪ್ರಶಾಂತ್ ಭೂಷಣ್ ತಾನು ಈಮೇಲ್ ಕಳುಹಿಸಿರುವುದಾಗಿ ಹೇಳಿದರು.
ಚುನಾವಣಾ ಆಯೋಗ ಬಿಡುಗಡೆ ಮಾಡಿದ ದತ್ತಾಂಶ ಬಹಿರಂಗಗೊಳಿಸಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಬೇನಾಮಿ ಕಂಪೆನಿಗಳು ಹಾಗೂ ನಷ್ಟದಲ್ಲಿರುವ ಕಂಪೆನಿಗಳ ನಿಧಿಯ ಮೂಲದ ಕುರಿತು ತನಿಖೆ ನಡೆಸಲು ಸಂಬಂಧಿತರಿಗೆ ನಿರ್ದೇಶನ ನೀಡುವಂತೆ ಅರ್ಜಿ ಕೋರಿದೆ.
ಕೊಡು-ಕೊಳ್ಳುವಿಕೆ ವ್ಯವಸ್ಥೆಯ ಭಾಗವಾಗಿ ಕಂಪೆನಿಗಳು ನೀಡಿದ ದೇಣಿಗೆ ಹಣವನ್ನು ವಸೂಲಿ ಮಾಡುವಂತೆ ಸಂಬಂಧಿತರಿಗೆ ನಿರ್ದೇಶನ ನೀಡುವಂತೆ ಕೂಡ ಅರ್ಜಿ ಕೋರಿದೆ.
ಬಿಜೆಪಿ ಸರಕಾರ ಪರಿಚಯಿಸಿದ ಅನಾಮಧೇಯ ರಾಜಕೀಯ ನಿಧಿಯ ಚುನಾವಣಾ ಬಾಂಡ್ ಯೋಜನೆಯನ್ನು ಐವರು ಸದಸ್ಯರ ಸಾಂವಿಧಾನಿಕ ಪೀಠ ಫೆಬ್ರವರಿ 15ರಂದು ರದ್ದುಗೊಳಿಸಿತ್ತು.