ಬದಲಾಗದ ಅರ್ಹತಾ ಮಾನದಂಡ: ಕೇಂದ್ರದ ಶಿಕ್ಷಣ ಸಾಲ ಯೋಜನೆಯಲ್ಲಿ ದಾಖಲಾತಿ ಕುಸಿತ
ಹೊಸದಿಲ್ಲಿ: ಕೇಂದ್ರ ಸರಕಾರದ ಶಿಕ್ಷಣ ಸಾಲ ಯೋಜನೆಯಲ್ಲಿ ದಾಖಲಾತಿ ಸ್ಥಿರವಾಗಿ ಇಳಿಕೆಯಾಗುತ್ತಿದೆ. 2009ರಲ್ಲಿ ಯೋಜನೆಯು ಆರಂಭಗೊಂಡಾಗಿನಿಂದ ಪೋಷಕರ ವಾರ್ಷಿಕ ಆದಾಯ 4.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು ಎನ್ನುವ ಅರ್ಹತಾ ಮಾನದಂಡ ಬದಲಾಗದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
The Telegraph ಸುದ್ದಿಸಂಸ್ಥೆಯು ಆರ್‌ಟಿಐ ಕಾಯ್ದೆಯಡಿ ಪಡೆದುಕೊಂಡ ದತ್ತಾಂಶಗಳಂತೆ ಯುಪಿಎ ಸರಕಾರವು ಆರಂಭಿಸಿದ್ದ ಕೇಂದ್ರ ವಲಯ ಬಡ್ಡಿ ಸಬ್ಸಿಡಿ (ಸಿಎಸ್‌ಐಎಸ್) ಯೋಜನೆಯ ಮೊದಲ ಏಳು ವರ್ಷಗಳ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 3.2 ಲಕ್ಷ ಹೊಸ ವಿದ್ಯಾರ್ಥಿಗಳು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದರು. ನಂತರದ ಏಳು ವರ್ಷಗಳಲ್ಲಿ 2016-17ರಿಂದ 2022-23ರವರೆಗೆ ಹೊಸ ಫಲಾನುಭವಿಗಳ ಸರಾಸರಿ ವಾರ್ಷಿಕ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆಯಾಗಿದೆ.
2009ರಲ್ಲಿ 4.5 ಲಕ್ಷ ರೂ.ಇತರ ಹಿಂದುಳಿದ ವರ್ಗಗಳಲ್ಲಿ (ಒಬಿಸಿ) ‘ಕೆನೆಪದರ’ಕ್ಕೆ ಸೇರದವರನ್ನು ಗುರುತಿಸಲು ವಾರ್ಷಿಕ ಆದಾಯ ಮಿತಿಯಾಗಿತ್ತು,ಹೀಗಾಗಿ ಸರಕಾರವು ಶಿಕ್ಷಣ ಸಾಲಕ್ಕೆ 4.5 ಲಕ್ಷ ರೂ.ಗಿಂತ ಕಡಿಮೆ ಆದಾಯವನ್ನು ಅರ್ಹತಾ ಮಾನದಂಡವನ್ನಾಗಿಸಿತ್ತು.
ಅದರ ನಂತರ 2013ರಲ್ಲಿ ಆರು ಲಕ್ಷ ರೂ.ಗೆ ಮತ್ತು 2017ರಲ್ಲಿ ಎಂಟು ಲಕ್ಷ ರೂ.ಗೆ; ಹೀಗೆ ಎರಡು ಸಲ ಒಬಿಸಿ ಆದಾಯ ಮಿತಿಯನ್ನು ಪರಿಷ್ಕರಿಸಲಾಗಿದೆ. ಆದರೆ ಸರಾಸರಿ ವಾರ್ಷಿಕ ಹಣದುಬ್ಬರ ಶೇ.5ಕ್ಕಿಂತ ಹೆಚ್ಚಿದ್ದರೂ ಸಿಎಸ್‌ಐಎಸ್ ಯೋಜನೆಗೆ ವಾರ್ಷಿಕ ಆದಾಯ ಮಿತಿಯನ್ನು ಎಂದೂ ಪರಿಷ್ಕರಿಸಿಲ್ಲ.
ಎರಡು ಒಬಿಸಿ ಆದಾಯ ಮಿತಿ ಪರಿಷ್ಕರಣೆಗಳ ನಂತರವೂ ಸಿಎಸ್‌ಐಎಸ್ ಯೋಜನೆಯಲ್ಲಿ ಪೋಷಕರ ವಾರ್ಷಿಕ ಆದಾಯದ ಅರ್ಹತಾ ಮಾನದಂಡವನ್ನು ಹೆಚ್ಚಿಸುವಲ್ಲಿ ವೈಫಲ್ಯವು ಹೊಸ ಫಲಾನುಭವಿಗಳ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ.
ಯೋಜನೆಯು ವೃತ್ತಿಪರ ಅಥವಾ ತಾಂತ್ರಿಕ ಕೋರ್ಸ್‌ಗಳಿಗೆ ಲಭ್ಯವಿದೆ. ಪದವಿ ಕೋರ್ಸ್‌ಗಳಲ್ಲಿ ಶಿಕ್ಷಣ ಸಾಲ ಪಡೆದ ವಿದ್ಯಾರ್ಥಿಗಳು ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರೆ ಮತ್ತೆ ಸಾಲಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.
ಯೋಜನೆಯಡಿ ಫಲಾನುಭವಿಯು ತನ್ನ ಕೋರ್ಸ್‌ನ್ನು ಪೂರ್ಣಗೊಳಿಸಿದ ಬಳಿಕ 12 ತಿಂಗಳುಗಳವರೆಗೆ ಅಥವಾ ಉದ್ಯೋಗವನ್ನು ಪಡೆದ ಬಳಿಕ ಆರು ತಿಂಗಳುಗಳವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅದಕ್ಕೆ,ಸಂಪೂರ್ಣ ಬಡ್ಡಿ ಸಬ್ಸಿಡಿಯನ್ನು ಒದಗಿಸಲಾಗುತ್ತದೆ.