ಪರಿಸರ ಬಿಕ್ಕಟ್ಟಿನಿಂದ ಬದುಕುವ ಹಕ್ಕಿಗೆ ಅಪಾಯ : ಸುಪ್ರೀಂ ಕೋರ್ಟ್
ಹೊಸದಿಲ್ಲಿ : ‘‘ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮಗಳಿಗೆ ಒಳಗಾಗದಿರುವ ಹಕ್ಕು’’ ಸಂವಿಧಾನವು ಜನರಿಗೆ ಒದಗಿಸಿರುವ ಬದುಕುವ ಮತ್ತು ಸಮಾನತೆಯ ಹಕ್ಕುಗಳ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಪಾಯದ ಅಂಚಿನಲ್ಲಿರುವ ಹಕ್ಕಿಗಳಾದ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’ ಮತ್ತು ‘ಲೆಸ್ಟರ್ ಫ್ಲೋರಿಕನ್’ಗಳನ್ನು ರಕ್ಷಿಸುವ ಅಗತ್ಯದ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಈ ಹೇಳಿಕೆ ನೀಡಿದೆ.
ನ್ಯಾಯಾಲಯವು ತೀರ್ಪನ್ನು ಮಾರ್ಚ್ 21ರಂದು ನೀಡಿತ್ತು. ಆದರೆ ವಿವರವಾದ ತೀರ್ಪನ್ನು ಎಪ್ರಿಲ್ 6ರಂದು ಬಹಿರಂಗಗೊಳಿಸಲಾಗಿದೆ.
ಸಂವಿಧಾನದ 48ಎ ವಿಧಿಯು, ಪರಿಸರವನ್ನು ರಕ್ಷಿಸಿ ಅಭಿವೃದ್ಧಿಪಡಿಸುವಂತೆ ಹಾಗೂ ಅರಣ್ಯಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವಂತೆ ಸರಕಾರಕ್ಕೆ ಕರೆ ಕೊಡುತ್ತದೆ ಎಂದು ನ್ಯಾಯಾಲಯ ಹೇಳಿತು.
ಅದೂ ಅಲ್ಲದೆ, ಪ್ರಾಕೃತಿಕ ಪರಿಸರವನ್ನು ರಕ್ಷಿಸಿ ಅಭಿವೃದ್ಧಿಪಡಿಸುವುದು ಮತ್ತು ಜೀವಿಗಳ ಬಗ್ಗೆ ಅನುಕಂಪ ಹೊಂದುವುದು ನಾಗರಿಕರ ಕರ್ತವ್ಯವಾಗಿದೆ ಎಂದು ಸಂವಿಧಾನದ 51ಎ(ಜಿ) ವಿಧಿ ಹೇಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂವಿಧಾನದ 48ಎ ವಿಧಿಯು ಸರಕಾರಿ ನೀತಿಯ ತತ್ವಗಳಿಗೆ ಸಂಬಂಧಿಸಿದ ಅಧ್ಯಾಯದ ಭಾಗವಾಗಿದೆ ಹಾಗೂ 51ಎ ವಿಧಿಯು ಮೂಲಭೂತ ಹಕ್ಕುಗಳ ಕುರಿತ ಅಧ್ಯಾಯದ ಭಾಗವಾಗಿದೆ. ಹಾಗಾಗಿ, ಈ ಎರಡೂ ವಿಧಿಗಳನ್ನು ಕಾನೂನಿಗೆ ಅನುಗುಣವಾಗಿ ಜಾರಿಗೊಳಿಸುವುದು ಸಾಧ್ಯವಿಲ್ಲ.
ಆದರೂ, ನೈಸರ್ಗಿಕ ಪ್ರಪಂಚದ ಪ್ರಾಮುಖ್ಯತೆಯನ್ನು ಸಂವಿಧಾನ ಗುರುತಿಸುತ್ತದೆ ಎನ್ನುವುದನ್ನು ಈ ವಿಧಿಗಳು ಹೇಳುತ್ತವೆ ಎಂದು ನ್ಯಾಯಾಲಯ ಹೇಳಿತು.