ಒಡಿಶಾ ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ದೌರ್ಜನ್ಯ ಪ್ರಕರಣ: ಸೇನಾ, ಸಿಬಿಐ ಮಾಜಿ ಮುಖ್ಯಸ್ಥರ ನಡುವೆ ಜಟಾಪಟಿ

Update: 2024-09-25 05:37 GMT

ವಿಕೆ ಸಿಂಗ್ ಮತ್ತು ಎಂ ನಾಗೇಶ್ವರ ರಾವ್ (Photo: PTI)

ಹೊಸದಿಲ್ಲಿ: ಒಡಿಶಾದ ಪೊಲೀಸ್ ಠಾಣೆಯೊಂದರಲ್ಲಿ ಸೇನಾ ಅಧಿಕಾರಿಯ ಭಾವಿ ಪತ್ನಿಗೆ ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿ ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಮತ್ತು ಮಾಜಿ ಸಿಬಿಐ ನಿರ್ದೇಶಕ ಎಂ ನಾಗೇಶ್ವರ ರಾವ್ ನಡುವೆ ಜಟಾಪಟಿ ನಡೆದಿದೆ.

ಜನರಲ್ ವಿಕೆ ಸಿಂಗ್ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಸೇನಾ ಅಧಿಕಾರಿಯ ನಿಶ್ಚಿತ ವಧು, ಮಹಿಳೆಯ ಜೊತೆ ಪೊಲೀಸರ ವರ್ತನೆ ನಾಚಿಕೆಗೇಡಿನ ಮತ್ತು ಭಯಾನಕ ಎಂದು ಬಣ್ಣಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪ್ರತಿಯೊಬ್ಬರೂ ನಿವೃತ್ತ ಸೇನಾ ಅಧಿಕಾರಿಯ ಮಗಳ ಮಾತನ್ನು ಕೇಳಬೇಕು, ಒಡಿಶಾದ ಭರತ್‌ಪುರ ಪೊಲೀಸ್ ಠಾಣೆಯಲ್ಲಿ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಒಡಿಶಾ ಮುಖ್ಯಮಂತ್ರಿಗಳು ಅಪರಾಧಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ವಿಕೆ ಸಿಂಗ್ ಆಗ್ರಹಿಸಿದ್ದಾರೆ.

ಭರತ್‌ಪುರ ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನ, ಥಳಿತ, ಲೈಂಗಿಕ ದೌರ್ಜನ್ಯದ ಆರೋಪವನ್ನು ಮಹಿಳೆ ಮಾಡಿದ್ದರು. ಜನರಲ್ ವಿಕೆ ಸಿಂಗ್ ಅವರ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಒಡಿಶಾ ಕೇಡರ್ ಐಪಿಎಸ್ ಅಧಿಕಾರಿ, ಸಿಬಿಐ ಮಾಜಿ ನಿರ್ದೇಶಕ ಎಂ ನಾಗೇಶ್ವರ ರಾವ್ ಪೋಸ್ಟ್ ಮಾಡಿದ್ದು, ಸೇನಾ ಅಧಿಕಾರಿ ಮತ್ತು ಅವರ ಪ್ರೇಯಸಿ ಮದ್ಯಪಾನ ಮಾಡಿದ್ದರು ಮತ್ತು ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ.

ಸೇನಾ ಅಧಿಕಾರಿ ಮತ್ತು ಅವರ ಪ್ರೇಯಸಿ ಮದ್ಯಪಾನ ಮಾಡಿ ತಡರಾತ್ರಿ ವಾಹನ ಚಲಾಯಿಸಿದ್ದು, ಅವರು ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಜಗಳವಾಡಿದ್ದಾರೆ. ನಂತರ ಭರತ್‌ಪುರ ಪೊಲೀಸ್ ಠಾಣೆಯಲ್ಲಿ ರಾದ್ದಾಂತ ಸೃಷ್ಟಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಮತ್ತು ರಕ್ತ ಪರೀಕ್ಷೆಗೆ ಒಳಗಾಗುವಂತೆ ಕೇಳಿದಾಗ ಅವರು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ಒಡಿಶಾ ಪೊಲೀಸರನ್ನು ನಾಗೇಶ್ವರ ರಾವ್ ಸಮರ್ಥಿಸಿಕೊಂಡಿದ್ದು, ತಮ್ಮ ಹೇಳಿಕೆಯನ್ನು ಮರುಪರಿಶೀಲಿಸುವಂತೆ ಜನರಲ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ. ಒಬ್ಬ ವೈಯಕ್ತಿಕ ಸೇನಾ ಅಧಿಕಾರಿಯ ಕೃತ್ಯಕ್ಕೆ ಪೊಲೀಸರನ್ನು ನಿಂದಿಸುವುದು ಸರಿಯಲ್ಲ. ಆದರೆ ಒಬ್ಬ ವ್ಯಕ್ತಿಯ ವರ್ತನೆಗೆ ನಾನು ಇಡೀ ಭಾರತೀಯ ಸೇನೆಯ ಶಿಸ್ತನ್ನು ಪ್ರಶ್ನಿಸುವುದಿಲ್ಲ. ಸೈನಿಕನಾಗಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಸೇನೆಯನ್ನು ಕೂಡ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News