ಹಳಿ ತಪ್ಪುವುದರಲ್ಲಿ ವಿಶ್ವ ದಾಖಲೆ ನಿರ್ಮಿಸಿದ ರೈಲ್ವೆ : ಮಮತಾ ಬ್ಯಾನರ್ಜಿ ವ್ಯಂಗ್ಯ
ಕೋಲ್ಕತ್ತಾ : ಹಳಿ ತಪ್ಪುವುದರಲ್ಲಿ ಭಾರತೀಯ ರೈಲ್ವೆಯು ವಿಶ್ವ ದಾಖಲೆ ನಿರ್ಮಿಸಿದೆ ಎಂದು ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಮಾಜಿ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದರು.
ಪಶ್ಚಿಮ ಬಂಗಾಳದ ಜಲ್ಪಾಯಿಗುರಿ ಜಿಲ್ಲೆಯಲ್ಲಿ ಖಾಲಿ ಗೂಡ್ಸ್ ರೈಲಿನ ಕೆಲವು ವ್ಯಾಗನ್ ಗಳು ಹಳಿ ತಪ್ಪಿದ ಬೆನ್ನಿಗೇ, ಮಮತಾ ಬ್ಯಾನರ್ಜಿಯವರಿಂದ ಈ ಹೇಳಿಕೆ ಹೊರ ಬಿದ್ದಿತು.
ಬೀರ್ಭುಮ್ ನಲ್ಲಿ ಆಯೋಜಿಸಲಾಗಿದ್ದ ಆಡಳಿತಾತ್ಮಕ ಪರಾಮರ್ಶೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ರೈಲ್ವೆಯಲ್ಲಿ ಏನಾಗುತ್ತಿದೆ? ಇಂದೂ ಕೂಡಾ ಒಂದು ಹಳಿ ತಪ್ಪಿದ ಘಟನೆ ನಡೆದಿದೆ. ಹಳಿ ತಪ್ಪುವುದರಲ್ಲಿ ಭಾರತೀಯ ರೈಲ್ವೆಯು ವಿಶ್ವ ದಾಖಲೆ ನಿರ್ಮಿಸಿದೆ. ಆದರೆ, ಈ ಕುರಿತು ಯಾರೂ ಏನೂ ಹೇಳುತ್ತಿಲ್ಲ?” ಎಂದು ವರದಿಗಾರರನ್ನು ಪ್ರಶ್ನಿಸಿದರು.
“ಜನರ ಸುರಕ್ಷತೆ ಮತ್ತು ಭದ್ರತೆ ಅಪಾಯದಲ್ಲಿದೆ ಹಾಗೂ ಅವರು ರೈಲಿನಲ್ಲಿ ಪ್ರಯಾಣಿಸಲು ಭಯ ಪಡುತ್ತಿದ್ದಾರೆ. ರೈಲ್ವೆ ಸಚಿವರೆಲ್ಲಿ? ಕೇವಲ ಚುನಾವಣೆಯ ಸಂದರ್ಭದಲ್ಲಿ ಮತ ಕೇಳಿದರಷ್ಟೇ ಸಾಲದು, ಜನರು ಅಪಾಯದಲ್ಲಿದ್ದಾಗ, ಅವರ ನೆರವಿಗೆ ನಿಲ್ಲಬೇಕು” ಎಂದು ಅವರು ಚಾಟಿ ಬೀಸಿದರು.
ಜಲ್ಪಾಯಿಗುರಿ ಜಿಲ್ಲೆಯ ಮೈನಾಗುರಿ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ಬೆಳಗ್ಗೆ ಖಾಲಿ ಗೂಡ್ಸ್ ರೈಲಿನ ಐದು ವ್ಯಾಗನ್ ಗಳು ಹಳಿ ತಪ್ಪಿದವು. ಬೆಳಗ್ಗೆ ಸುಮಾರು 6.20 ಗಂಟೆ ಸಮಯದಲ್ಲಿ ನಡೆದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲ್ವೆಯ ಇತ್ತೀಚಿನ ವರದಿ ಪ್ರಕಾರ, ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೆ ದೇಶಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ 18 ಪ್ರಯತ್ನಗಳು ನಡೆದಿವೆ ಎಂದು ಹೇಳಲಾಗಿದೆ.