ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್ ಬಿಜೆಪಿ ಸೇರ್ಪಡೆ
Update: 2024-08-30 11:31 GMT
ರಾಂಚಿ: ಜೆಎಂಎಂ ತೊರೆದ ಎರಡು ದಿನಗಳ ನಂತರ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಶುಕ್ರವಾರ ಬಿಜೆಪಿ ಸೇರಿದ್ದಾರೆ.
ಇಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಸಮ್ಮುಖದಲ್ಲಿ ಸೊರೆನ್ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು.
67ರ ಹರೆಯದ ಬುಡಕಟ್ಟು ನಾಯಕ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಜೆಎಂಎಂನ ಪ್ರಮುಖ ಮತ ಬ್ಯಾಂಕ್ ಆಗಿರುವ ಪರಿಶಿಷ್ಟ ಪಂಗಡಗಳೊಂದಿಗೆ ತನ್ನ ಸಂಪರ್ಕವನ್ನು ಹೆಚ್ಚಿಸಲು ಬಿಜೆಪಿಗೆ ಸಹಾಯವಾಗಲಿದೆ ಎನ್ನಲಾಗಿದೆ.
ಚಂಪೈ ಸೊರೆನ್ ಅವರು ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಅವರ ಆಪ್ತರಾಗಿದ್ದರು.
1990 ರ ದಶಕದಲ್ಲಿ ಪ್ರತ್ಯೇಕ ರಾಜ್ಯ ರಚಿಸುವ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ ಚಂಪೈ ಅವರಿಗೆ 'ಜಾರ್ಖಂಡ್‌ನ ಹುಲಿ' ಎಂಬ ಹೆಸರಿದೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.