‘‘ಏಕರೂಪ ನಾಗರಿಕ ಸಂಹಿತೆಯಿಂದ ಬುಡಕಟ್ಟು ಸಮುದಾಯಗಳನ್ನು ದೂರವಿಡಿ’’

ಏಕರೂಪ ನಾಗರಿಕ ಸಂಹಿತೆಯಿಂದ ಬುಡಕಟ್ಟು ಸಮುದಾಯಗಳನ್ನು ದೂರವಿಡಬೇಕು ಎಂಬ ಬಿಜೆಪಿ ಸಂಸದ ಸಂಸದ ಸುಶೀಲ್ ಕುಮಾರ್ ಮೋದಿಯವರ ನಿಲುವನ್ನು ಆರೆಸ್ಸೆಸ್ ನ ಬುಡಕಟ್ಟು ವಿಭಾಗದ ಅಂಗಸಂಸ್ಥೆ ‌ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಸ್ವಾಗತಿಸಿದೆ.

Update: 2023-07-09 15:36 GMT
Editor : Muad | Byline : ವಾರ್ತಾಭಾರತಿ

Photo: Facebook

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆಯಿಂದ ಬುಡಕಟ್ಟು ಸಮುದಾಯಗಳನ್ನು ದೂರವಿಡಬೇಕು ಎಂಬ ಬಿಜೆಪಿ ಸಂಸದ ಸಂಸದ ಸುಶೀಲ್ ಕುಮಾರ್ ಮೋದಿಯವರ ನಿಲುವನ್ನು ಆರೆಸ್ಸೆಸ್ ನ ಬುಡಕಟ್ಟು ವಿಭಾಗದ ಅಂಗಸಂಸ್ಥೆ ‌ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಸ್ವಾಗತಿಸಿದೆ.

ಕಳೆದ ವಾರ ಕಾನೂನು ಆಯೋಗದ ಸದಸ್ಯರು ಮತ್ತು ಸಂಸದೀಯ ಸಮಿತಿಯ ಸಭೆಯಲ್ಲಿ ಬುಡಕಟ್ಟು ಸಮುದಾಯಗಳ ವಿಚಾರ ಪ್ರಸ್ತಾಪಿಸಿದ್ದ ಸುಶೀಲ್ ಕುಮಾರ್ ಮೋದಿ, ಈಶಾನ್ಯ ಮತ್ತು ಭಾರತದ ಇತರ ಭಾಗಗಳಲ್ಲಿನ ಬುಡಕಟ್ಟು ಸಮುದಾಯಗಳ, ಆಚರಣೆ, ಪದ್ಧತಿಗಳು ಇತರ ಸಮುದಾಯಗಳಿಗಿಂತ ಭಿನ್ನವಾಗಿದೆ. ಹೀಗಾಗಿ ಅಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕಾರ್ಯಸಾಧ್ಯತೆಯ ಬಗ್ಗೆ ಪ್ರಶ್ನಿಸಿದ್ದರು ಎಂದು ವರದಿಯಾಗಿತ್ತು.

ಈ ಕುರಿತು ಹೇಳಿಕೆ ನೀಡಿರುವ ಆರೆಸ್ಸೆಸ್ ಅಂಗಸಂಸ್ಥೆ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಸುಶೀಲ್ ಕುಮಾರ್ ಮೋದಿ ಅವರನ್ನು ಬೆಂಬಲಿಸಿದೆ.

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕುರಿತು ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸುವ ಮೊದಲು ಬುಡಕಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದು ಕಾನೂನು ಆಯೋಗವನ್ನು ಬುಡಕಟ್ಟು ಸಂಘಟನೆಯ ಉಪಾಧ್ಯಕ್ಷ ಸತ್ಯೇಂದ್ರ ಸಿಂಗ್ ಒತ್ತಾಯಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ತೆಗೆದುಕೊಳ್ಳುವ ವಿಷಯಗಳಲ್ಲಿ ಎಲ್ಲಾ ಭಾರತೀಯರಿಗೆ ಸಮಾನ ಕಾನೂನುಗಳನ್ನು ಹೊಂದಿರುತ್ತದೆ. ಸದ್ಯ ವಿವಿಧ ಧಾರ್ಮಿಕ ಸಮುದಾಯಗಳಿಗೆ ಕೆಲವೊಂದು ವಿಷಯಗಳಲ್ಲಿ ತಮ್ಮದೇ ಆದ ವೈಯಕ್ತಿಕ ಕಾನೂನುಗಳಿವೆ.

ಪಿತೃಪ್ರಭುತ್ವದ ವೈಯಕ್ತಿಕ ಕಾನೂನುಗಳ ಕಾರಣ ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದ ಹಕ್ಕುಗಳಿಂದ ವಂಚಿತರಾಗುವ ಮಹಿಳೆಯರಿಗೆ ಸಮಾನತೆ ಮತ್ತು ನ್ಯಾಯವನ್ನು ಖಚಿತಪಡಿಸುವುದು ಏಕರೂಪ ನಾಗರಿಕ ಸಂಹಿತೆಯ ಗುರಿ ಎಂದು ಬಿಜೆಪಿ ಹೇಳಿದೆ.

ಇತ್ತೀಚೆಗಷ್ಟೇ ಇದೇ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಬೇರೆ ಬೇರೆ ಸಮುದಾಯಗಳಿಗೆ ಬೇರೆ ಬೇರೆ ಕಾನೂನುಗಳೆಂಬ ಎರಡೆರಡು ವ್ಯವಸ್ಥೆಯಲ್ಲಿ ದೇಶ ಮುನ್ನಡೆಯಲು ಸಾಧ್ಯವಿಲ್ಲ. ಹೀಗಾಗಿ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯ ಅಗತ್ಯವಿದೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Muad

contributor

Byline - ವಾರ್ತಾಭಾರತಿ

contributor

Similar News