ವಿಚಾರಣೆಗಾಗಿ ಭಾರತದಿಂದ ಶೇಕ್ ಹಸೀನಾ ಗಡಿಪಾರು: ಬಿಎನ್ ಪಿ ಒತ್ತಾಯ

Update: 2024-08-21 03:52 GMT

PC: PTI

ಢಾಕಾ: ವಿಚಾರಣೆ ಎದುರಿಸುವ ಸಲುವಾಗಿ ದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಶೇಕ್ ಹಸೀನಾ ಅವರನ್ನು ಭಾರತದಿಂದ ಗಡಿಪಾರು ಮಾಡಬೇಕು ಎಂದು ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮಂಗಳವಾರ ಆಗ್ರಹಿಸಿದೆ.

ಬಾಂಗ್ಲಾದೇಶದಲ್ಲಿ ಆಗಸ್ಟ್ 5ರಂದು ನಡೆದ ವಿದ್ಯಾರ್ಥಿ ನೇತೃತ್ವದ ಕ್ಷಿಪ್ರಕ್ರಾಂತಿಯ ಸಂಬಂಧ ಮಾಜಿ ಪ್ರಧಾನಿ ಶೇಕ್ ಹಸೀನಾ ವಿರುದ್ಧ ಹತ್ಯೆ ಮತ್ತು ಇತರ ಪ್ರಕರಣಗಳು ದಾಖಲಾಗಿದೆ.

"ನೀವು ಕಾನೂನಾತ್ಮಕ ವಿಧಾನದಲ್ಲಿ ಅವರನ್ನು ಬಾಂಗ್ಲಾದೇಶ ಸರ್ಕಾರಕ್ಕೆ ಹಸ್ತಾಂತರಿಸಲೇಬೇಕು ಎಂದು ಕರೆ ನೀಡುತ್ತಿದ್ದೇವೆ. ಈ ದೇಶದ ಜನತೆ ಆಕೆಯ ವಿಚಾರಣೆಗಾಗಿ ನಿರ್ಧಾರ ಕೈಗೊಂಡಿದ್ದಾರೆ. ಆಕೆ ವಿಚಾರಣೆ ಎದುರಿಸಲಿ" ಎಂದು ಬಿಎನ್ ಪಿ ಮಹಾ ಪ್ರಧಾನ ಕಾರ್ಯದರ್ಶಿ ಮಿರ್ಝಾ ಫಕ್ರುಲ್ ಇಸ್ಲಾಮ್ ಆಲಂಗೀರ್ ಅವರು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಝಿಯಾವುರ್ ರಹಮಾನ್ ಅವರಿಗೆ ಗೌರವ ಸಲ್ಲಿಸಿದ ಬಳಿಕ ನುಡಿದರು.

ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆಯಲು ಅವಕಾಶ ಮಾಡಿಕೊಟ್ಟಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ದೇಶದ ಬದ್ಧತೆಗೆ ಅನುಸಾರವಾಗಿಲ್ಲ. "ಅಲ್ಲಿ ವಾಸ್ತವ್ಯ ಇರುವ ಅವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಕ್ರಾಂತಿಯನ್ನು ಹತ್ತಿಕ್ಕಲು ಸಂಚು ರೂಪಿಸಲು ಆರಂಭಿಸಿದ್ದಾರೆ" ಎಂಬ ಗಂಭೀರ ಆರೋಪವನ್ನು ಆಲಂಗೀರ್ ಮಾಡಿದ್ದಾರೆ.

ಬಾಂಗ್ಲಾದೇಶ ಹಾಗೂ ಭಾರತ ಗಡೀಪಾರು ಒಪ್ಪಂದವನ್ನು ಹೊಂದಿದ್ದು, ಇದರ ಆಧಾರದಲ್ಲಿ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆಗೆ ಕಾರಣವಾಗುವ ಹಣಕಾಸು ಅಪರಾಧಗಳು ಸೇರಿದಂತೆ ಗಡೀಪಾರು ಮಾಡಲು ಅರ್ಹವಾದ ಯಾವುದೇ ಅಪರಾಧಗಳಲ್ಲಿ ವಿಚಾರಣೆ ಪ್ರಕ್ರಿಯೆಗಳನ್ನು ಕೋರ್ಟ್ ಆರಂಭಿಸಿದಾಗ ಅಂಥ ವ್ಯಕ್ತಿಯನ್ನು ಹಸ್ತಾಂತರಿಸುವುದು ಅಗತ್ಯ.

ಅಸ್ವಸ್ಥರಾಗಿ ಗೃಹಬಂಧನದಲ್ಲಿರುವ ಬಿಎನ್ ಪಿ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಖಲೀದಾ ಝೀಯಾ ಅವರನ್ನು ಹಸೀನಾ ಪಲಾಯನದ ಬಳಿಕ ಬಿಡುಗಡೆ ಮಾಡಲಾಗಿತ್ತು. ಹಸೀನಾ ವಿರುದ್ಧ ಹತ್ಯೆ ಮತ್ತು ಸುಲಿಗೆ ಪ್ರಕರಣಗಳು ದಾಖಲಾಗಿದ್ದು, ಇವು ಗಡೀಪಾರು ಮಾಡಲು ಅರ್ಹವಾದ ಅಪರಾಧಗಳ ವರ್ಗಗಳಲ್ಲಿ ಬರುತ್ತವೆ ಎಂದು ಬಿಎನ್ ಪಿ ಅಭಿಪ್ರಾಯಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News