ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ವಿಸ್ತರಣೆ ; ಪರಿಶೀಲಿಸಲಿರುವ ಸಂವಿಧಾನ ಪೀಠ

Update: 2023-09-20 16:38 GMT

 Supreme Court | Photo : PTI 

ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿಯ ವಿಸ್ತರಣೆಯು ಸಾಂವಿಧಾನಿಕ ಸಿಂಧುತ್ವವನ್ನು ಹೊಂದಿದೆಯೇ ಎನ್ನುವುದನ್ನು ಪರಿಶೀಲಿಸಲು ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಬುಧವಾರ ನಿರ್ಧರಿಸಿದೆ.

ಮೂಲತಃ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಭೆಯು 1950ರಲ್ಲಿ ಭಾರತೀಯ ಸಂವಿಧಾನವು ಅಸ್ತಿತ್ವಕ್ಕೆ ಬಂದ ನಂತರ ಕೇವಲ 10 ವರ್ಷಗಳ ಅವಧಿಗೆ ಎಸ್ಸಿ/ಎಸ್ಟಿಗಳಿಗೆ ಮೀಸಲಾತಿಯನ್ನು ಒದಗಿಸಲು ಉದ್ದೇಶಿಸಿತ್ತು. ಆದಾಗ್ಯೂ ಎಸ್ಸಿ/ಎಸ್ಟಿಗಳು ಮತ್ತು ಆಂಗ್ಲೋ-ಇಂಡಿಯನ್ಗಳಿಗೆ ಸ್ಥಾನಗಳ ಮೀಸಲಾತಿಯನ್ನು ಅಂತ್ಯಗೊಳಿಸಲು ಕಾಲಾವಧಿಗೆ ಸಂಬಂಧಿಸಿದ ಸಂವಿಧಾನದ 334ನೇ ವಿಧಿಗೆ ಈ ಎಲ್ಲ ದಶಕಗಳಲ್ಲಿ ಹಲವಾರು ಸಲ ತಿದ್ದುಪಡಿಗಳನ್ನು ತರಲಾಗಿದೆ. ಪ್ರತಿ ಸಲವೂ ಮೀಸಲಾತಿಯನ್ನು ಅಂತ್ಯಗೊಳಿಸಲು ಗಡುವನ್ನು 10 ವರ್ಷಗಳ ಕಾಲ ವಿಸ್ತರಿಸಲಾಗಿದೆ.

2019ರ ಕಾಯ್ದೆಯು ಅಂಗ್ಲೋ-ಇಂಡಿಯನ್ ಸಮುದಾಯಕ್ಕೆ ಮೀಸಲಾತಿಗೆ ಮಂಗಳ ಹಾಡಿದೆ ಹಾಗೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಸ್ಸಿ/ಎಸ್ಟಿಗಳ ಮೀಸಲಾತಿಯನ್ನು ಅಂತ್ಯಗೊಳಿಸಲು 2030ರ ಗಡುವನ್ನು ನಿಗದಿಗೊಳಿಸಿದೆ. 2030ರ ವೇಳೆಗೆ ಎಸ್ಸಿ/ಎಸ್ಟಿಗಳು ಸಂವಿಧಾನವು ಅಸ್ತಿತ್ವಕ್ಕೆ ಬಂದಾಗಿನಿಂದ 80 ವರ್ಷಗಳ ಕಾಲ ಮೀಸಲಾತಿಯನ್ನು ಅನುಭವಿಸಿರುತ್ತಾರೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಎಸ್ಸಿ/ಎಸ್ಟಿಗಳಿಗೆ ಮೀಸಲಾತಿಯನ್ನು ಕಾಯ್ದಿರಿಸಲಷ್ಟೇ ಪದೇ ಪದೇ 334 ನೇ ವಿಧಿಗೆ ತಿದ್ದುಪಡಿಗಳನ್ನು ತರಲು ಸಂಸತ್ತು ತನ್ನ ಅಧಿಕಾರವನ್ನು ಬಳಸುವುದು ಸಾಂವಿಧಾನಿಕ ಸಿಂಧುತ್ವವನ್ನು ಹೊಂದಿದೆಯೇ ಎನ್ನುವುದನ್ನು ಪರಿಶೀಲಿಸಲು ಸಂವಿಧಾನ ಪೀಠವು ಬುಧವಾರ ನಿರ್ಧರಿಸಿದೆ.

ಎಸ್ಸಿ/ಎಸ್ಟಿ ಸಮುದಾಯಗಳಿಗೆ ಅನ್ವಯ ವ್ಯಾಪ್ತಿ ಕುರಿತಂತೆ ಮಾತ್ರ ತಾನು 2019ರ 104ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಪರಿಶೀಲಿಸುತ್ತೇನೆ ಮತ್ತು 70 ವರ್ಷಗಳ ಕಾಲ ಸೌಲಭ್ಯವನ್ನು ಅನುಭವಿಸಿರುವ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಮೀಸಲಾತಿ ಅಂತ್ಯದ ಗೋಜಿಗೆ ಹೋಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು.

ಕೆಲವು ಸಮುದಾಯಗಳಿಗೆ ನಿರಂತರವಾಗಿ ಸ್ಥಾನಗಳ ಮೀಸಲಾತಿಯು ಇತರ ಸಮುದಾಯಗಳ ಸದಸ್ಯರು ಆ ಸ್ಥಾನಗಳಿಂದ ಸ್ಪರ್ಧಿಸುವುದನ್ನು ತಡೆಯುತ್ತದೆ. ಇದು ನಿಮ್ಮ ವಾದವಾಗಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಅರ್ಜಿದಾರ ಅಶೋಕಕುಮಾರ ಜೈನ್ ಪರ ಹಾಜರಾಗಿದ್ದ ವಕೀಲರಾದ ಸಿ.ಎ.ಸುಂದರಂ ಮತ್ತು ರೋಹಿಣಿ ಮೂಸಾ ಅವರನ್ನು ಪ್ರಶ್ನಿಸಿದರು.

ಕೆಲವು ಸಮುದಾಯಗಳಿಗೆ ನಿರಂತರ ಮತ್ತು ಪದೇಪದೇ ಮೀಸಲಾತಿ ವಿಸ್ತರಣೆಗಳು ಅಭ್ಯರ್ಥಿಗಳ ಆಯ್ಕೆಯಿಂದ ಮತದಾರರನ್ನು ವಂಚಿಸಿವೆ ಮತ್ತು ಅವರು ತಮ್ಮ ಮತಗಳನ್ನು ಮುಕ್ತವಾಗಿ ಚಲಾಯಿಸಲೂ ಸಾಧ್ಯವಾಗುತ್ತಿಲ್ಲ ಎಂದು ಸುಂದರಂ ತಿಳಿಸಿದರು.

ಸವಾಲು 104ನೇ ತಿದ್ದುಪಡಿಗೆ ಸೀಮಿತವಾಗಿಲ್ಲ,ಆದರೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಎಸ್ಸಿ/ಎಸ್ಟಿಗಳಿಗೆ ಮೀಸಲಾತಿ ನೀಡುವುದರ ಹಿಂದಿನ ‘ಸಂಪೂರ್ಣ ತತ್ತ್ವ’ವನ್ನು ಒಳಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮೀಸಲಾತಿಯ ನಿಯತಕಾಲಿಕ ವಿಸ್ತರಣೆಗಳು ಸಂವಿಧಾನದ 14ನೇ ವಿಧಿಯಡಿ ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದೂ ಅವರು ವಾದಿಸಿದರು.

104ನೇ ಸಂವಿಧಾನ ತಿದ್ದುಪಡಿ ಕಾಯ್ದೆಯು ಸಿಂಧುವಾಗಿದೆ ಎಂದು ಕೇಂದ್ರವು ವಾದಿಸಿದೆ.

ಸಂವಿಧಾನ ಪೀಠವು ನ.21ರಂದು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News