ಟೊಮೆಟೊ ಮಾರಾಟದಿಂದ ಲಕ್ಷಾಂತರ ರೂಪಾಯಿ ಗಳಿಸಿದ್ದ ರೈತನನ್ನು ಹತ್ಯೆಗೈದ ದರೋಡೆಕೋರರು !
ತಿರುಪತಿ: ರೈತರಿಗೆ ತೀರಾ ಅತ್ಯಗತ್ಯವಾಗಿದ್ದ ಆರ್ಥಿಕ ನಿರಾಳತೆಯನ್ನು ತಂದಿರುವ ಟೊಮೆಟೊದ ಸಾರ್ವಕಾಲಿಕ ದಾಖಲೆ ಬೆಲೆಯು ರೈತನೊಬ್ಬನನ್ನು ಬಲಿ ಪಡೆದಿರುವ ಘಟನೆಯು ಆಂಧ್ರಪ್ರದೇಶದಲ್ಲಿ ನಡೆದಿದೆ ಎಂದು timesofindia.com ವರದಿ ಮಾಡಿದೆ.
ದುಬಾರಿ ಬೆಲೆ ಗಳಿಸಿರುವ ರೈತರ ಆದಾಯವನ್ನು ಗುರಿಯಾಗಿಸಿಕೊಂಡಿರುವ ದುಷ್ಕರ್ಮಿಗಳು, ರೈತನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಮಂಡಲದ ಬೋಡುಮಲ್ಲದಿನ್ನೆ ಗ್ರಾಮದಲ್ಲಿ ನಡೆದಿದೆ.
ನರೇಂ ರಾಜಶೇಖರ್ ರೆಡ್ಡಿ (62) ಎಂದು ಗುರುತಿಸಲಾಗಿರುವ ರೈತರೊಬ್ಬರ ಮೃತದೇಹವು ಗ್ರಾಮದ ಹೊರವಲಯದಲ್ಲಿ ಬುಧವಾರ ಪತ್ತೆಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಮಾರಾಟ ಮಾಡಿ, ಗಮನಾರ್ಹ ಮೊತ್ತವನ್ನು ಗಳಿಸಿರುವುದರಿಂದ ರಾಜಶೇಖರ್ ರೆಡ್ಡಿ ಮೇಲೆ ದರೋಡೆಕೋರರು ದಾಳಿ ನಡೆಸಿ, ಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ರೈತನು ತನ್ನ ಬೆಳೆ ಮಾರಾಟದಿಂದ ರೂ. 30 ಲಕ್ಷ ಆದಾಯ ಗಳಿಸಿದ್ದ ಎಂದು ವರದಿಯಾಗಿದೆ.
ಬೋಡುಮಲ್ಲದಿನ್ನೆ ಗ್ರಾಮದ ಹೊರವಲಯದಲ್ಲಿರುವ ಕೃಷಿ ಭೂಮಿಯಲ್ಲಿ ವಾಸಿಸುತ್ತಿದ್ದ ರಾಜಶೇಖರ್ ರೆಡ್ಡಿ, ಗ್ರಾಮಕ್ಕೆ ಹಾಲು ಸರಬರಾಜು ಮಾಡಲು ಮಂಗಳವಾರ ರಾತ್ರಿ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ರೈತನನ್ನು ದಾರಿ ಮಧ್ಯೆ ಅಡ್ಡಗಟ್ಟಿರುವ ಅಪರಿಚಿತ ಹಂತಕರು, ಆತನ ಕೈ ಹಾಗೂ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಂತರ ಬಟ್ಟೆಯಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ.
ಮೃತ ರೈತ ತನ್ನ ಪತ್ನಿ ಹಾಗೂ ಬೆಂಗಳೂರಿನಲ್ಲಿ ವಾಸಿಸುತ್ತಿರುವ ತನ್ನಿಬ್ಬರು ವಿವಾಹಿತ ಪುತ್ರಿಯರನ್ನು ಅಗಲಿದ್ದಾರೆ.
ಇದಕ್ಕೂ ಮುನ್ನ, ಇನ್ನಷ್ಟೇ ಗುರುತು ಪತ್ತೆಯಾಗಬೇಕಿರುವ ಹಂತಕರು ಮೃತ ರೈತನ ಪತ್ನಿಯನ್ನು ಆತನ ವಾಸ್ತವ್ಯದ ಕುರಿತು ಪ್ರಶ್ನಿಸಿದ್ದರು ಎಂದು ಹೇಳಲಾಗಿದೆ. ಟೊಮೆಟೊ ಖರೀದಿಸುವ ನೆಪದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ನಮ್ಮ ಹೊಲಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ್ದರು ಎಂದು ಮೃತ ರೈತನ ಪತ್ನಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಜಶೇಖರ್ ಹಾಲು ಮಾರಲು ಗ್ರಾಮಕ್ಕೆ ತೆರಳಿದ್ದಾರೆ ಎಂದು ತಿಳಿಸಿದಾಗ, ಅವರು ಅಲ್ಲಿಂದ ತೆರಳಿದರು ಎಂದೂ ಆಕೆ ಹೇಳಿದ್ದಾಳೆ.
ಮದನಪಲ್ಲಿ ಪ್ರಾಂತ್ಯದ ಕೃಷಿ ಮಾರುಕಟ್ಟೆಯಲ್ಲಿ ಟೊಮೆಟೊ ಮಾರಾಟದಿಂದ ರಾಜಶೇಖರ್ ಸುಮಾರು ರೂ. 30 ಲಕ್ಷ ಆದಾಯ ಗಳಿಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮೃತ ರೈತನು ಆರ್ಥಿಕ ಲಾಭ ಗಳಿಸಿರುವುದರಿಂದ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಸಬ್ ಇನ್ಸ್‌ಪೆಕ್ಟರ್ ಆರ್.ಗಂಗಾಧರ್ ರಾವ್, ನಂತರ ಮೃತ ರೈತನ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಪ್ರಕರಣವನ್ನು ಭೇದಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಕೇಸಪ್ಪ ತಿಳಿಸಿದ್ದಾರೆ. "ಪೊಲೀಸರು ವಾಸನೆ ಪತ್ತೆ ಹಚ್ಚುವ ಶ್ವಾನವನ್ನು ಬಳಸಿದ್ದು, ಆ ಶ್ವಾನವು ಮೃತ ರೈತನ ನಿವಾಸದಿಂದ ಅಪರಾಧ ನಡೆದ ಸ್ಥಳದವರೆಗೂ ಹೋಗಿದೆ" ಎಂದೂ ಅವರು ಹೇಳಿದ್ದಾರೆ.