ಬಿಹಾರ | ರೈಲ್ವೆ ನಿಲ್ದಾಣದಲ್ಲಿ ಬಾಳೆಹಣ್ಣಿಗಾಗಿ ಕೋತಿಗಳ ಕಾದಾಟ ; ರೈಲು ಸಂಚಾರ ವಿಳಂಬ
ಪಟ್ನಾ : ಬಿಹಾರದ ಸಮಸ್ತಿಪುರ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ಎರಡು ಕೋತಿಗಳ ನಡುವಿನ ಕಾದಾಟದಿಂದ ಸುಮಾರು ಒಂದು ಗಂಟೆಗಳ ಕಾಲ ರೈಲಿನ ಕಾರ್ಯಾಚರಣೆಯನ್ನು ವಿಳಂಬವಾದ ಘಟನೆ ನಡೆದಿದೆ.
ಪ್ಲಾಟ್‌ಫಾರ್ಮ್ ಸಂಖ್ಯೆ 4 ರ ಬಳಿ ಬಾಳೆಹಣ್ಣಿಗಾಗಿ ಕೋತಿಗಳು ಜಗಳವಾಡುತ್ತಿತ್ತು. ಜಗಳ ತಾರಕ್ಕೇರಿದಂತೆ ಒಂದು ಕೋತಿ ಇನ್ನೊಂದರ ಮೇಲೆ ರಬ್ಬರ್ ತರಹದ ವಸ್ತುವನ್ನು ಎಸೆದಿದೆ. ಆ ವಸ್ತುವು ಓವರ್ಹೆಡ್ ತಂತಿಗೆ ಬಡಿದು ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಕೂಡಲೇ ತಂತಿ ತುಂಡಾಗಿ ರೈಲಿನ ಬೋಗಿಯ ಮೇಲೆ ಬಿದ್ದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ!
ರೈಲ್ವೇ ನಿಲ್ದಾಣದ ವಿದ್ಯುತ್ ನಿರ್ವಹಣೆ ವಿಭಾಗವು ಕೂಡಲೇ ತಂತಿಯ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿತು. ಅದೇ ವೇಳೆ ಪ್ಲಾಟ್‌ಫಾರ್ಮ್ ಸಂಖ್ಯೆ 4 ರಿಂದ ನಿರ್ಗಮಿಸಬೇಕಿದ್ದ ಬಿಹಾರ ಸಂಪರ್ಕ ಕ್ರಾಂತಿ ಕೋತಿ ಜಗಳದಿಂದ ಸುಮಾರು 15 ನಿಮಿಷಗಳ ಕಾಲ ವಿಳಂಬವಾಗಿದೆ. ಇದು ಇತರ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ಪ್ರಯಾಣಿಕರಿಗೆ ತೊಂದರೆಯಾಯಿತು.
ಸಮಸ್ತಿಪುರ್ ರೈಲು ನಿಲ್ದಾಣದಲ್ಲಿ ಕೋತಿಗಳ ಕಾಟ ಇದೇ ಮೊದಲಲ್ಲ. ಈ ಹಿಂದೆ ಕೋತಿಗಳ ಕಾಟದಿಂದ ಪ್ರಯಾಣಿಕರು ಗಾಯಗೊಂಡಿದ್ದು, ಅರಣ್ಯ ಇಲಾಖೆಯವರು ಕೋತಿಗಳನ್ನು ಸೆರೆ ಹಿಡಿದಿದ್ದರು.