ಚಲನಚಿತ್ರಗಳ ಪೈರಸಿಯನ್ನು ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ಹೊಸದಿಲ್ಲಿ: ಮಣಿಪುರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಪ್ರತಿಭಟನೆಗಳಿಂದಾಗಿ ಸೋಮವಾರ ಲೋಕಸಭೆಯನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಸದನವು ಪ್ರತಿಭಟನೆಗಳ ನಡುವೆಯೇ ಚಲನಚಿತ್ರಗಳ ಪೈರಸಿಯನ್ನು ತಡೆಯಲು ಸಿನಿಮಾಟೋಗ್ರಾಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು.
ಮಸೂದೆಯು ಈಗಾಗಲೇ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ. ಚಲನಚಿತ್ರದ ಪೈರೇಟೆಡ್ ಪ್ರತಿಗಳನ್ನು ಮಾಡುವವರಿಗೆ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ಚಿತ್ರನಿರ್ಮಾಣ ವೆಚ್ಚದ ಶೇ.5ರಷ್ಟು ದಂಡವನ್ನು ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ. UA ವರ್ಗದಡಿ UA 7+,UA 13+ ಮತ್ತು UA 16+ ಹೀಗೆ ಮೂರು ವಯಸ್ಸು-ಆಧಾರಿತ ಪ್ರಮಾಣಪತ್ರಗಳನ್ನು ಮಸೂದೆಯು ಅಸ್ತಿತ್ವಕ್ಕೆ ತರಲಿದೆ ಹಾಗೂ ಟಿವಿ ಮತ್ತು ಇತರ ಮಾಧ್ಯಮಗಳಲ್ಲಿ ಚಿತ್ರದ ಪ್ರದರ್ಶನಕ್ಕಾಗಿ ಪ್ರತ್ಯೇಕ ಪ್ರಮಾಣಪತ್ರವನ್ನು ವಿತರಿಸಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್ಸಿ)ಗೆ ಅಧಿಕಾರವನ್ನು ನೀಡಲಿದೆ.
ಚಿತ್ರೋದ್ಯಮವು ಪೈರಸಿಯಿಂದಾಗಿ ವಾರ್ಷಿಕ 20,000 ಕೋ.ರೂ.ಗಳ ನಷ್ಟವನ್ನು ಎದುರಿಸುತ್ತಿದೆ. ಪೈರಸಿಯಿಂದ ಉಂಟಾಗುವ ನಷ್ಟವನ್ನು ತಡೆಯಲು ಈ ಮಸೂದೆಯನ್ನು ತರಲಾಗಿದೆ. ಚಲನಚಿತ್ರೋದ್ಯಮದ ದೀರ್ಘಕಾಲದ ಬೇಡಿಕೆಯನ್ನು ಮಸೂದೆಯು ಗಣನೆಗೆ ತೆಗೆದುಕೊಂಡಿದೆ. ಚಲನಚಿತ್ರಗಳ ಪೈರಸಿ ಕ್ಯಾನ್ಸರ್ ಇದ್ದಂತೆ ಮತ್ತು ಈ ಮಸೂದೆಯು ಅದನ್ನು ಬೇರು ಸಹಿತ ಕಿತ್ತೊಗೆಯಲು ಪ್ರಯತ್ನಿಸಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದರು.
ಸಿಬಿಎಫ್ಸಿ ಈಗ ನೀಡುತ್ತಿರುವ ಪ್ರಮಾಣಪತ್ರಗಳು ಕೇವಲ 10 ವರ್ಷಗಳ ಸಿಂಧುತ್ವವನ್ನು ಹೊಂದಿವೆ. ಮಸೂದೆಯು ಕಾಯ್ದೆಯಾದಾಗ ಈ ಪ್ರಮಾಣ ಪತ್ರಗಳು ಕಾಯಂ ಸಿಂಧುತ್ವವನ್ನು ಹೊಂದಿರಲಿವೆ ಎಂದು ಠಾಕೂರ್ ತಿಳಿಸಿದರು.
ಪೂರ್ವಾಹ್ನ 11 ಗಂಟೆಗೆ ಸದನವು ಸಮಾವೇಶಗೊಂಡಾಗ ಸ್ಪೀಕರ್ ಓಂ ಬಿರ್ಲಾ ಅವರು,ಮಲಾವಿಯ ಸಂಸದೀಯ ನಿಯೋಗವು ಭಾರತಕ್ಕೆ ಭೇಟಿ ನೀಡಿದೆ ಮತ್ತು ಸದನದ ಕಲಾಪಗಳನ್ನು ವೀಕ್ಷಿಸುತ್ತಿದೆ ಎಂದು ತಿಳಿಸಿದರು.
ಅವರ ಹೇಳಿಕೆ ಮಗಿಯುತ್ತಿದ್ದಂತೆ ಎದ್ದು ನಿಂತ ಪ್ರತಿಪಕ್ಷ ಸದಸ್ಯರು ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿಯಿಂದ ಹೇಳಿಕೆಗಾಗಿ ಆಗ್ರಹಿಸಿದರು. ಸದನದ ಅಂಗಳಕ್ಕೆ ಧಾವಿಸಿದ ಅವರು ಫಲಕಗಳನ್ನು ಪ್ರದರ್ಶಿಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆರಂಭದಲ್ಲಿ ಪ್ರತಿಪಕ್ಷ ಸದಸ್ಯರ ಪ್ರತಿಭಟನೆಯನ್ನು ಕಡೆಗಣಿಸಿದ ಸ್ಪೀಕರ್ ಪ್ರಶ್ನೆವೇಳೆಯನ್ನು ಮುಂದುವರಿಸಿದರು. ಪ್ರತಿಭಟನೆಗಳು ಮತ್ತು ಘೋಷಣೆಗಳ ನಡುವೆಯೇ ಶಿಕ್ಷಣ ಮತ್ತು ವಿತ್ತ ಸಚಿವಾಲಯಗಳಿಗೆ ಸಂಬಂಧಿಸಿದ ಎರಡು ಪ್ರಶ್ನೆಗಳನ್ನು ಚರ್ಚೆಗೆತ್ತಿಕೊಳ್ಳಲಾಯಿತು.
ಪ್ರತಿಭಟನೆ ಮುಂದುವರಿದಾಗ ಸ್ಪೀಕರ್ ತಮ್ಮ ಆಸನಗಳಿಗೆ ಮರಳುವಂತೆ ಮತ್ತು ಕಲಾಪಗಳನ್ನು ಪಾಲ್ಗೊಳ್ಳುವಂತೆ ಪ್ರತಿಪಕ್ಷ ಸದಸ್ಯರನ್ನು ಕೋರಿಕೊಂಡರು. ಇದಕ್ಕೆ ಪ್ರತಿಪಕ್ಷಗಳ ಸದಸ್ಯರು ಕಿವಿಗೊಡದಿದ್ದಾಗ ಸ್ಪೀಕರ್ ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಿದರು.
ಎರಡು ಗಂಟೆಗೆ ಸದನವು ಮರುಸಮಾವೇಶಗೊಂಡಾಗಲೂ ಪ್ರತಿಭಟನೆಗಳು ಮುಂದುವರಿದಿದ್ದು,ಅದರ ನಡುವೆಯೇ ಸಿನಿಮಾಟೋಗ್ರಾಫ್ ತಿದ್ದುಪಡಿಯನ್ನು ಅಂಗೀಕರಿಸಲಾಯಿತು. ಪ್ರತಿಪಕ್ಷ ಸದಸ್ಯರಿಗೆ ಪುನರಪಿ ಮಾಡಿಕೊಂಡ ಮನವಿಗಳು ಫಲ ನೀಡದಿದ್ದಾಗ ಸ್ಪೀಕರ್ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.