ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ; ಮತ್ತೆ 41 ಮಂದಿ ಮೃತ್ಯು
ಹೊಸದಿಲ್ಲಿ: ಮುಂಗಾರು ಮಾರುತ ಹಾಗೂ ಪಶ್ಚಿಮ ಪ್ರಕ್ಷುಬ್ಧತೆಯ ಕಾರಣದಿಂದ ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರಿದಿದೆ. ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಭಾರಿ ಸಂಖ್ಯೆಯ ಸಾವು ನೋವು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಹಲವೆಡೆ ವ್ಯಾಪಕ ಭೂಕುಸಿತ, ಪರ್ವತ ಪ್ರದೇಶ ಹಾಗೂ ಬಯಲು ಪ್ರದೇಶಗಳಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸಿದ್ದಾರೆ. ಬಿಯಾಸ್, ಸಟ್ಲೇಜ್ ಮತ್ತು ಇತರ ನದಿಗಳ ಪ್ರವಾಹ ನೀರಿನಲ್ಲಿ ಮನೆಗಳು ಹಾಗೂ ನಿಲ್ಲಿಸಿದ್ದ ಕಾರುಗಳು ತೇಲಿ ಹೋಗುತ್ತಿದ್ದು, ಗ್ರಾಮಗಳು ಹಾಗೂ ನಗರಗಳು, ಕೃಷಿಭೂಮಿ ಜಲಾವೃತವಾಗಿವೆ. ವಿವಿಧೆಡೆ ಮಳೆ ಸಂಬಂಧಿ ಅನಾಹುತಗಳಿಗೆ 41 ಮಂದಿ ಬಲಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಹಿಮಾಚಲ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ಶುಕ್ರವಾರದಿಂದೀಚೆಗೆ ಮಳೆಯ ಅಬ್ಬರಕ್ಕೆ 17 ಮಂದಿ ಬಲಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಹೇಳಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಆಸ್ತಿ ಪಾಸ್ತಿಗಳು ಸೇರಿ ಸುಮಾರು 4000 ಕೋಟಿ ರೂಪಾಯಿ ಮೌಲ್ಯದ ಹಾನಿ ಸಂಭವಿಸಿದೆ ಎಂಧು ಅವರು ವಿವರಿಸಿದ್ದಾರೆ.
ಧಾರಾಕಾರ ಮಳೆಯಿಂದ ವ್ಯಾಪಕ ಹಾನಿ ಹಾಗೂ ರಸ್ತೆ, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ಉಪ ಕೇಂದ್ರಗಳು ಮತ್ತು ನೀರು ಸರಬರಾಜು ಯೋಜನೆಗಳು ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. 4686 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿದ್ದು, ನೂರಾರು ಗ್ರಾಮಗಳು ಕತ್ತಲಲ್ಲಿವೆ ಎಂದು ತಿಳಿದು ಬಂದಿದೆ.
ಮನಾಲಿ-ಲೆಹ್ ನಡುವಿನ ರಾಷ್ಟ್ರೀಯ ಹೆದ್ದಾರಿ ಸೋಮವಾರ ಕುಸಿದಿದೆ. ಇದರಿಂದಾಗಿ ಲಹಾಲ್-ಸ್ಪಿತಿ ಜಿಲ್ಲೆ ಹಾಗೂ ಲಡಾಖ್ ನಡುವಿನ ಸಂಪರ್ಕ ಕಡಿದು ಹೋಗಿದೆ. ಪಂಜಾಬ್ ಮತ್ತು ಹರ್ಯಾಣದಲ್ಲೂ ವ್ಯಾಪಕ ಹಾನಿಯಾಗಿದ್ದು, ಪ್ರವಾಹ ಹಾಗೂ ಭೂಕುಸಿತದಿಂದಾಗಿ ಸುಮಾರು 50 ಮಾರ್ಗಗಳಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.