ರಕ್ಷಣಾ ಪಿಎಸ್‌ಯುನಿಂದ ನಿಷೇಧಿತ ಜರ್ಮನ್ ಕಂಪನಿಗೆ ಸ್ಫೋಟಕಗಳ ಮಾರಾಟ; ಆತಂಕ ಸೃಷ್ಟಿ

Update: 2024-10-06 11:04 GMT

PC : economictimes.indiatimes.com

ಹೊಸದಿಲ್ಲಿ: ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು) ಮ್ಯುನಿಷನ್ಸ್ ಇಂಡಿಯಾ ಲಿ.(ಎಂಐಎಲ್) ಜರ್ಮನಿಯ ರೈನ್‌ಮೆಟಲ್ ಕಂಪನಿಗೆ 500 ಟನ್‌ಗಳಷ್ಟು ಸ್ಫೋಟಕಗಳನ್ನು ಮಾರಾಟ ಮಾಡಿದ್ದು, ಇದು ಎಚ್ಚರಿಕೆಯ ಗಂಟೆಗಳನ್ನು ಮೊಳಗಿಸಿದೆ. ಭ್ರಷ್ಟಾಚಾರದ ಆರೋಪದಲ್ಲಿ ರೈನ್‌ಮೆಟಲ್‌ನ್ನು 2012ರಿಂದ ವ್ಯವಹಾರದಿಂದ ನಿಷೇಧಿಸಲಾಗಿದೆ. ಕಳೆದ ವರ್ಷದ ಅಂತ್ಯದಲ್ಲಿ ಮತ್ತು 2024ರ ಆರಂಭದಲ್ಲಿ ಸ್ಫೋಟಕಗಳು ಪೂರೈಕೆಯಾಗಿದ್ದು, ಈ ವಿಷಯವನ್ನು ಸರಕಾರದ ಗಮನಕ್ಕೆ ತಂದ ಬಳಿಕ ಅಂತಿಮ ಕಂತಿನ ಪೂರೈಕೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ ಎಂದು economictimes ವರದಿ ಮಾಡಿದೆ.

ರಷ್ಯಾ-ಉಕ್ರೇನ್ ಸಂಘರ್ಷ ಆರಂಭಗೊಂಡ ಬಳಿಕ ಕಳೆದ ಎರಡು ವರ್ಷಗಳಲ್ಲಿ ಸ್ಫೋಟಕಗಳಿಗೆ ಜಾಗತಿಕ ಬೇಡಿಕೆ ಉತ್ತುಂಗಕ್ಕೇರಿರುವುದರಿಂದ ಸರಕಾರಿ ಸ್ವಾಮ್ಯದ ರಕ್ಷಣಾ ಘಟಕ ಎಂಐಎಲ್ ಕೈತುಂಬ ಅಂತರರಾಷ್ಟ್ರೀಯ ಬೇಡಿಕೆಗಳನ್ನು ಹೊಂದಿದೆ. ಕಂಪನಿಯ ಸಾಮರ್ಥ್ಯದ ಉತ್ಪಾದನೆಯು ಸಂಪೂರ್ಣವಾಗಿ ಬುಕ್ ಆಗಿದ್ದು,ಅನೇಕ ಕಂಪನಿಗಳು ಬೇಡಿಕೆಗಳನ್ನು ಸಲ್ಲಿಸಲು ಸಾಲುಗಟ್ಟಿ ನಿಂತಿವೆ.

ಸುದ್ದಿಸಂಸ್ಥೆಯು ಪರಿಶೀಲಿಸಿರುವ ದಾಖಲೆಗಳ ಪ್ರಕಾರ,ಮಧ್ಯವರ್ತಿಯ ಮೂಲಕ ಸ್ಫೋಟಕಗಳ ಮಾರಾಟಕ್ಕೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು,144 ಟನ್‌ಗಳ ಮೊದಲ ಕಂತನ್ನು ಅಕ್ಟೋಬರ್ 2023ರಲ್ಲಿ ರವಾನಿಸಲಾಗಿತ್ತು. ಸಾರ್ವಜನಿಕ ದಾಖಲೆಗಳಂತೆ ರೈನ್‌ಮೆಟಾಲ್ ಈಗಾಗಲೇ ಸ್ವಾಧೀನ ಪಡಿಸಿಕೊಂಡಿರುವ ಎಕ್ಸ್‌ಪಾಲ್ ಎಂಬ ಸ್ಪ್ಯಾನಿಷ್ ಕಂಪನಿಗೆ ಸ್ಫೋಟಕಗಳನ್ನು ಪೂರೈಸಲಾಗಿತ್ತು. ಹೆಚ್ಚುವರಿಯಾಗಿ ಎರಡು ಕಂತುಗಳ ಸ್ಫೋಟಕಗಳನ್ನು ಪೂರೈಸಲಾಗಿದ್ದು,ಕೊನೆಯ ಕಂತಿನ ಸ್ಫೋಟಕಗಳನ್ನು ಮಾರ್ಚ್ 2024ರಲ್ಲಿ ರವಾನಿಸಲಾಗಿತ್ತು.

ಸ್ಫೋಟಕಗಳ ಪೂರೈಕೆಗಾಗಿ ಮೂಲ ಒಪ್ಪಂದವನ್ನು ಎಕ್ಸ್‌ಪಾಲ್ ಜೊತೆಗೆ ಮಾಡಿಕೊಳ್ಳಲಾಗಿದ್ದು,ಕಂಪನಿಯನ್ನು ರೈನ್‌ಮೆಟಾಲ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಮತ್ತು ಈ ವಿಷಯವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿರಲಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ. ಸುದ್ದಿಸಂಸ್ಥೆಯು ಕಳುಹಿಸಿದ್ದ ವಿವರವಾದ ಪ್ರಶ್ನಾವಳಿಗೆ ಎಂಐಎಲ್ ಮತ್ತು ರಕ್ಷಣಾ ಸಚಿವಾಲಯ ಉತ್ತರಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News