ತಮಿಳುನಾಡು | ಶಾಲೆಯಲ್ಲಿ ನಕಲಿ ಎನ್‌ ಸಿ ಸಿ ಶಿಬಿರ: 13 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಪ್ರಾಂಶಪಾಲ, ಶಿಕ್ಷಕರ ಬಂಧನ

Update: 2024-08-19 16:30 GMT

ಸಾಂದರ್ಭಿಕ ಚಿತ್ರ | AI

ಚೆನ್ನೈ : ತಮಿಳುನಾಡಿನ ಕೃಷ್ಣಗಿರಿ ಖಾಸಗಿ ಶಾಲೆಯಲ್ಲಿ ಆಗಸ್ಟ್ 5 ಹಾಗೂ 9ರ ನಡುವೆ ಆಯೋಜಿಸಲಾಗಿದ್ದ ನಕಲಿ ಎನ್‌ ಸಿ ಸಿ ಶಿಬಿರದ ಸಂದರ್ಭ ಕನಿಷ್ಠ 13 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ.

ಓರ್ವ ಬಾಲಕಿಗೆ ಲೈಂಗಿಕ ಹಲ್ಲೆ ನಡೆಸಲಾಗಿದೆ. ಉಳಿದ 12 ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಕನಿಷ್ಠ 11 ಮಂದಿಯನ್ನು ಬಂಧಿಸಲಾಗಿದೆ. ನಕಲಿ ಶಿಬಿರದ ಸಂದರ್ಭ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಪ್ರಧಾನ ಆರೋಪಿ ಎಂದು ಗುರುತಿಸಲಾದ ಶಿವರಾಮನನ್ನು ಸೋಮವಾರ ಬಂಧಿಸಲಾಗಿದೆ. ನಾಮ್ ತಮಿಳರ ಕಚ್ಚಿಯ ಯುವ ಘಟಕ ಕೃಷ್ಣಗಿರ ಪೂರ್ವ ಜಿಲ್ಲಾ ಕಾರ್ಯದರ್ಶಿ ಶಿವರಾಮನ್ ವಿರುದ್ಧ ಪೋಕ್ಸೊ ಕಾಯ್ದೆ ಹಾಗೂ ಬಿಎನ್ಎಸ್ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆಯ ಕುರಿತು ಶಾಲಾ ವಿದ್ಯಾರ್ಥಿನಿಯರು ದೂರು ನೀಡಿದ ಬಳಿಕವೂ ಪೊಲೀಸರಿಗೆ ಮಾಹಿತಿ ನೀಡದ ಶಾಲೆಯ ಪ್ರಾಂಶುಪಾಲ ಎ. ಸತೀಶ್ ಕುಮಾರ್, ಶಾಲೆ ಕರೆಸ್ಪಾಂಡೆಂಟ್ ಸ್ಯಾಮ್ಸನ್ ವೆಸ್ಲೆ ಹಾಗೂ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ.

ನಕಲಿ ಶಿಬಿರದ ಆಯೋಜಕರು ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ ಸಂದರ್ಭ ಶಾಲೆಯಲ್ಲಿ ಎನ್‌ ಸಿ ಸಿ ಘಟಕ ಇರಲಿಲ್ಲ. ಶಾಲೆಯ ಆಡಳಿತ ಮಂಡಳಿ ಆಯೋಜಕರ ಹಿನ್ನೆಲೆಯನ್ನು ಪರಿಶೀಲಿಸಲಿಲ್ಲ ಹಾಗೂ ಶಿಬಿರ ನಡೆಸಲು ಅನುಮತಿ ಪಡೆದುಕೊಂಡಿರಲಿಲ್ಲ. ಅಲ್ಲದೆ, ವಿದ್ಯಾರ್ಥಿನಿಯರ ಮೇಲ್ವಿಚಾರಣೆಗಾಗಿ ಶಿಕ್ಷಕರನ್ನು ನಿಯೋಜಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇತರ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News