ಮಹುವಾ ಮೊಯಿತ್ರಾ ವಿರುದ್ಧ ಉದ್ಯಮಿ ದರ್ಶನ್ ಹಿರಾನಂದಾನಿ ಸಲ್ಲಿಸಿದ ಅಫಿಡವಿಟ್ ಸಿಕ್ಕಿದೆ: ಲೋಕಸಭೆಯ ನೈತಿಕತೆ ಸಮಿತಿ
ಹೊಸದಿಲ್ಲಿ: ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಅಫಿಡವಿಟ್ ತನಗೆ ಸಿಕ್ಕಿದೆ ಎಂದು ಲೋಕಸಭೆಯ ನೈತಿಕತೆ ಸಮಿತಿ ಹೇಳಿದೆಯಲ್ಲದೆ ಅಫಿಡವಿಟ್‌ನಲ್ಲಿರುವ ಎಲ್ಲಾ ಆರೋಪಗಳನ್ನೂ ತನಿಖೆ ನಡೆಸಲಾಗುವುದು ಎಂದು ಹೇಳಿದೆ. ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿರುವ ಆರೋಪ ಈ ಮೂಲಕ ಹೊರಿಸಲಾಗಿದೆ.
ಮಹುವಾ ತಮ್ಮ ಮುಂದೆ ಹಲವು ಆಗ್ರಹಗಳನ್ನು ಇಡುತ್ತಿದ್ದರು ಹಾಗೂ ದುಬಾರಿ ಉಡುಗೊರೆಗಳಿಗೂ ಬೇಡಿಕೆಯಿಡುತ್ತಿದ್ದರು ಎಂದು ತಮ್ಮ ಅಫಿಡವಿಟ್‌ನಲ್ಲಿ ಹಿರಾನಂದಾನಿ ಆರೋಪಿಸಿದ್ದಾರೆ. ಸಂಸದೆ ತಮ್ಮ ಸಂಸತ್ ಲಾಗಿನ್ ರುಜುವಾತುಗಳನ್ನು ನೀಡಿದ್ದರು ಹಾಗೂ ಖ್ಯಾತಿ ಪಡೆಯಲೆಂದೇ ಸಂಸತ್ತಿನಲ್ಲಿಅದಾನಿ ಸಮೂಹದ ವಿರುದ್ಧ ವಾಗ್ದಾಳಿನಡೆಸುತ್ತಿದ್ದರು ಎಂದು ಆರೋಪಿಸಿದ್ಧಾರೆ.
ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಲೋಕಸಭೆಯ ನೈತಿಕತೆ ಸಮಿತಿ ಮುಖ್ಯಸ್ಥ ವಿನೋದ್ ಸೊಂಕರ್, ಸಮಿತಿಗೆ ಹಿರಾನಂದಾನಿ ಅವರ ಅಫಿಡವಿಟ್ ಸಿಕ್ಕಿದೆ. ಬಿಜೆಪಿ ಸಂಸದ ನಿಷಿಕಾಂತ್ ದುಬೆ ಅವರು ಮಾಡಿರುವ ದೂರಿನ ವಿಚಾರಣೆ ಅಕ್ಟೋಬರ್ 26ರಂದು ನಡೆಯಲಿದೆ. ಸಮಿತಿ ಮುಂದೆ ಸಾಕ್ಷ್ಯ ಹಾಜರುಪಡಿಸಲು ಅವರಿಗೆ ತಿಳಿಸಲಾಗಿದೆ,” ಎಂದು ಹೇಳಿದರು.
ಆರೋಪಗಳು ಗಂಭೀರ ಸ್ವರೂಪದ್ದು ಎಂದು ಹೇಳಿದ ಅವರು, ಸಮಿತಿ ಮೊದಲು ದುಬೆ ಅವರ ಪತ್ರ ಹಾಗೂ ಹಿರಾನಂದಾನಿ ಅವರ ಅಫಿಡವಿಟ್ ಪರಿಶೀಲಿಸಲಿದೆ ಎಂದು ಹೇಳಿದರು. ನಂತರ ಮಹುವಾ ಅವರನ್ನೂ ಆಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಹುವಾ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ ಹಾಗೂ ಯಾವುದೇ ತನಿಖೆಗೆ ಸಿದ್ಧ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಮಹುವಾ ದುಬೆ, ವಕೀಲ ದೆಹದ್ರಯಿ ಮತ್ತು ಸಾಮಾಜಿಕ ಜಾಲತಾಣ ಎಕ್ಸ್, ಗೂಗಲ್ ಶೋಧ ಇಂಜಿನ್ ಹಾಗೂ ಯುಟ್ಯೂಬ್ ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುಳ್ಳು ಸುದ್ದಿ ಪ್ರಕಟಿಸಬಾರದೆಂದು ತಡೆಯಾಜ್ಞೆ ಕೋರಿ ನ್ಯಾಯಾಲಯದ ಕದ ತಟ್ಟಿದ್ದಾರೆ.