ಉಪ ಚುನಾವಣೆಗೆ ಮುನ್ನ ಬೂತ್‌ಮಟ್ಟದ ಮುಸ್ಲಿಮ್ ಮತ್ತು ಯಾದವ ಅಧಿಕಾರಿಗಳನ್ನು ಬದಲಿಸಲಾಗಿದೆ: ಸಮಾಜವಾದಿ ಪಾರ್ಟಿ ಆರೋಪ
ಹೊಸದಿಲ್ಲಿ: ಉತ್ತರ ಪ್ರದೇಶದ ಕುಂಡರ್ಕಿ ಕ್ಷೇತದಲ್ಲಿ ನಡೆಯಲಿರುವ ಉಪಚುನಾವಣೆಗಾಗಿ ಚುನಾವಣೆಗೆ ಸಂಬಂಧಿತ ಮುಸ್ಲಿಮ್ ಮತ್ತು ಯಾದವ ಅಧಿಕಾರಿಗಳು ಮತ್ತು ಸೂಪರ್‌ವೈಸರ್‌ಗಳ ಸ್ಥಾನಗಳಲ್ಲಿ ಇತರ ಸಮುದಾಯಗಳಿಗೆ ಸೇರಿದವರನ್ನು ನೇಮಕಗೊಳಿಸಲಾಗಿದೆ ಎಂದು ಸಮಾಜವಾದಿ ಪಾರ್ಟಿ (ಎಸ್‌ಪಿ)ಯು ಆರೋಪಿಸಿದೆ.
ಶೀಘ್ರ ಉಪಚುನಾವಣೆಗಳು ನಡೆಯಲಿರುವ ಉತ್ತರ ಪ್ರದೇಶದ 10 ವಿಧಾನಸಭಾ ಕ್ಷೇತ್ರಗಳಲ್ಲಿ ಕುಂಡರ್ಕಿ ಸೇರಿದೆ. ಒಂಭತ್ತು ಕ್ಷೇತ್ರಗಳು ಹಾಲಿ ಶಾಸಕರು ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದ ಬಳಿಕ ತೆರವಾಗಿದ್ದರೆ, ಒಂದು ಕ್ಷೇತ್ರವು ಹಾಲಿ ಎಸ್‌ಪಿ ಶಾಸಕನ ಅನರ್ಹತೆಯಿಂದಾಗಿ ತೆರವುಗೊಂಡಿದೆ.
ರಾಜ್ಯದ ಜನಸಂಖ್ಯೆಯಲ್ಲಿ ಶೇ.28ರಿಂದ ಶೇ.30ರಷ್ಟು ಪಾಲು ಹೊಂದಿರುವ ಯಾದವರು ಮತ್ತು ಮುಸ್ಲಿಮರನ್ನು ಎಸ್‌ಪಿಯ ಕಟ್ಟಾ ಬೆಂಬಲಿಗರು ಎಂದು ಪರಿಗಣಿಸಲಾಗಿದೆ.
ಕುಂಡರ್ಕಿಯನ್ನು 1996ರಿಂದಲೂ ಮುಸ್ಲಿಮ್ ಶಾಸಕರು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿ ಈ ಕ್ಷೇತ್ರದಲ್ಲಿ ಕೊನೆಯ ಬಾರಿ 1993ರಲ್ಲಿ ಗೆದ್ದಿತ್ತು.
2002ರಿಂದ ಈ ಕ್ಷೇತ್ರದ ಶಾಸಕರಾಗಿದ್ದ ಝಿಯಾವುರ್ ರೆಹಮಾನ್ ಬರ್ಕ್ ಅವರು ಜೂನ್ 2024ರ ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಸಂಸದರಾಗಿದ್ದಾರೆ. ಚುನಾವಣೆಗಳು ಸಮೀಪಿಸುತ್ತಿದ್ದಂತೆ ಕುಂಡರ್ಕಿ ಕ್ಷೇತ್ರದಲ್ಲಿ ಯಾದವ ಮತ್ತು ಮುಸ್ಲಿಮ್ ಅಧಿಕಾರಿಗಳ ಬದಲು ಇತರ ಸಮುದಾಯಗಳ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಎಸ್‌ಪಿಯ ಉತ್ತರ ಪ್ರದೇಶ ಅಧ್ಯಕ್ಷ ಶ್ಯಾಮಲಾಲ ಪಾಲ್ ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ. ವರ್ಗಾವಣೆಗೊಂಡ 12 ಬಿಎಲ್‌ಒಗಳು ಮತ್ತು ಸುಪರ್‌ವೈಸರ್‌ಗಳ ಪಟ್ಟಿಯನ್ನೂ ಅವರು ಸಲ್ಲಿಸಿದ್ದಾರೆ. ಈ ಪೈಕಿ 10 ಜನರು ಮಸ್ಲಿಮರಾಗಿದ್ದಾರೆ. ಪಟ್ಟಿಯು ಸಂಪೂರ್ಣವಲ್ಲ,ಇತರ ಹಲವು ಅಧಿಕಾರಿಗಳನ್ನೂ ಬದಲಿಸಲಾಗಿದೆ ಎಂದು ಪಾಲ್ ಪತ್ರದಲ್ಲಿ ತಿಳಿಸಿದ್ದಾರೆ
ಉಪಚುನಾವಣೆಗೆ ಮುನ್ನ ಜಾತಿ ಮತ್ತು ಧರ್ಮದ ಆಧಾರದಲ್ಲಿ ಬಿಎಲ್‌ಒಗಳು ಮತ್ತು ಸುಪರ್‌ವೈಸರ್‌ಗಳ ಬದಲಾವಣೆಯು ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಾಂವಿಧಾನಿವಾಗಿದೆ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳ ಕುರಿತು ಪ್ರಶ್ನೆಯನ್ನೆತ್ತಿದೆ ಎಂದು ಪಾಲ್ ಹೇಳಿದ್ದಾರೆ.