ಗುಜರಾತ್| ಹಾಸ್ಟೆಲ್‌ ನಲ್ಲಿ ನಮಾಝ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ; ಐದು ಮಂದಿಗೆ ಗಾಯ

Update: 2024-03-17 06:36 GMT

Photo: NDTV 

ಅಹಮದಾಬಾದ್: ಆಫ್ರಿಕಾ ದೇಶಗಳು, ಅಫ್ಘಾನಿಸ್ತಾನ ಮತ್ತು ಉಝ್ಬೆಕಿಸ್ತಾನದ ವಿದ್ಯಾರ್ಥಿಗಳು ಗುಜರಾತ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ನಮಾಝ್ ಸಲ್ಲಿಸುವಾಗ, ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಐದು ಮಂದಿ ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೆ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವ ರಾಜ್ಯ ಗೃಹ ಸಚಿವ ಹರ್ಷ್ ಸಾಂಘ್ವಿ, ನ್ಯಾಯಯುತ ತನಿಖೆಯನ್ನು ಖಾತರಿಪಡಿಸುವಂತೆಯೂ ನಿರ್ದೇಶನ ನೀಡಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಮಸೀದಿ ಇಲ್ಲದೆ ಇರುವುದರಿಂದ ಅವರೆಲ್ಲ ರಮಝಾನ್ ತಿಂಗಳಿನ ವಿಶೇಷ ನಮಾಝ್ (ತರಾವೀಹ್) ಅನ್ನು ಸಲ್ಲಿಸಲು ವಿದ್ಯಾರ್ಥಿ ನಿಲಯದಲ್ಲಿ ನೆರೆದಿದ್ದರು ಎಂದು ಹೇಳಲಾಗಿದೆ. ಆದರೆ, ಕೆಲವೇ ಸಮಯದಲ್ಲಿ ಅವರ ಕೊಠಡಿಗಳಿಗೆ ದೊಣ್ಣೆ ಹಾಗೂ ಕತ್ತಿಗಳೊಂದಿಗೆ ನುಗ್ಗಿರುವ ದುಷ್ಕರ್ಮಿಗಳ ಗುಂಪು, ಅವರ ಮೇಲೆ ದಾಳಿ ನಡೆಸಿ, ಅವರ ಕೊಠಡಿಯನ್ನು ಧ್ವಂಸಗೊಳಿಸಿದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿ ನಿಲಯದ ಭದ್ರತಾ ಸಿಬ್ಬಂದಿಯು ಗುಂಪನ್ನು ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ ಎಂದೂ ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಈ ಪೈಕಿ ಅಫ್ಘಾನಿಸ್ತಾನದ ಓರ್ವ ವಿದ್ಯಾರ್ಥಿ, ಶ್ರೀಲಂಕಾ ಮತ್ತು ತುರ್ಕ್ ಮೆನಿಸ್ತಾನ್ ನ ತಲಾ ಓರ್ವ ವಿದ್ಯಾರ್ಥಿ ಹಾಗೂ ಆಫ್ರಿಕಾ ದೇಶಗಳ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

“ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯ ಕುರಿತು ರಾಜತಾಂತ್ರಿಕ ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ” ಎಂದು ಅವರು ಹೇಳಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News