ಗುಜರಾತ್: ಭಾರೀ ಮಳೆ,ಪ್ರವಾಹದ ಬಳಿಕ ಈಗ ಚಂಡಮಾರುತದ ಭೀತಿ
ಅಹ್ಮದಾಬಾದ್: ಗುಜರಾತಿನ ವಿವಿಧ ಭಾಗಗಳಲ್ಲಿ ಭಾರೀ ಮಳೆಯು ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಶುಕ್ರವಾರ ಚಂಡಮಾರುತ ಎಚ್ಚರಿಕೆಯನ್ನು ಹೊರಡಿಸಿದೆ.
ಗುಜರಾತ್ ಕರಾವಳಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತವು ಪಶ್ಚಿಮಕ್ಕೆ ಅರಬಿ ಸಮುದ್ರದತ್ತ ಸಾಗಲು ಸಜ್ಜಾಗಿದ್ದು,ಅಲ್ಲಿ ಅದು ಚಂಡಮಾರುತವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ ಎಂದು ಐಎಂಡಿ ಹೇಳಿದೆ.
ಗುಜರಾತಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಪ್ರವಾಹಗಳು ಈಗಾಗಲೇ ಕನಿಷ್ಠ 36 ಜೀವಗಳನ್ನು ಬಲಿತೆಗೆದುಕೊಂಡಿವೆ, 32,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 1,200 ಜನರನ್ನು ರಕ್ಷಿಸಲಾಗಿದೆ.
ಕಛ್ ಪ್ರದೇಶದಲ್ಲಿಯ ತೀವ್ರ ವಾಯುಭಾರ ಕುಸಿತವು ‘ಅಸ್ನಾ’ಚಂಡಮಾರುತವಾಗಿ ರೂಪುಗೊಳ್ಳುವ ಬಗ್ಗೆ ಐಎಂಡಿ ಎಚ್ಚರಿಕೆಯನ್ನು ನೀಡಿದೆ. ಚಂಡಮಾರುತ ಉಂಟಾದರೆ ಅದು ಅಪರೂಪದ ಅಗಸ್ಟ್ ವಿದ್ಯಮಾನವಾಗಲಿದೆ.
ಚಂಡಮಾರುತವಾಗಿ ರೂಪುಗೊಳ್ಳಲು ಸಜ್ಜಾಗುತ್ತಿರುವ ವಾಯುಭಾರ ಕುಸಿತವು ಅರಬಿ ಸಮುದ್ರದತ್ತ ಸಾಗಿ ಓಮನ್ ಕರಾವಳಿಯತ್ತ ಪಯಣಿಸುವ ನಿರೀಕ್ಷೆಯಿದೆ.
ವಾಯುಭಾರ ಕುಸಿತವು ಚಂಡಮಾರುತವಾಗಿ ರೂಪುಗೊಂಡರೆ ಅದು ‘ಅಸ್ನಾ’ ಎಂದು ನಾಮಕರಣಗೊಳ್ಳಲಿದೆ. ಈ ಹೆಸರನ್ನು ಪಾಕಿಸ್ತಾನವು ಸೂಚಿಸಿದೆ. 1891ರಿಂದ 2023ರ ನಡುವೆ ಆಗಸ್ಟ್ ತಿಂಗಳಲ್ಲಿ ಅರಬಿ ಸಮುದ್ರದಲ್ಲಿ ಕೇವಲ ಮೂರು ಚಂಡಮಾರುತಗಳು ಸೃಷ್ಟಿಯಾಗಿರುವುದರಿಂದ ‘ಅಸ್ನಾ’ ಅಪರೂಪದ ವಿದ್ಯಮಾನವಾಗಲಿದೆ.
ವಾಯುಭಾರ ಕುಸಿತವು ಚಂಡಮಾರುತವಾಗಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಮುನ್ನ ಪಶ್ಚಿಮ-ನೈರುತ್ಯ ದಿಕ್ಕಿನಲ್ಲಿ ಸಾಗಲಿದೆ ಮತ್ತು ಕಛ್ ಹಾಗೂ ಪಾಕಿಸ್ತಾನ ಕರಾವಳಿ ಸಮೀಪ ಆಗ್ನೇಯ ಅರಬಿ ಸಮುದ್ರವನ್ನು ತಲುಪಲಿದೆ ಎಂದು ಐಎಂಡಿ ಹೇಳಿದೆ.
ರಾಜ್ಯ ತುರ್ತು ನಿರ್ವಹಣಾ ಕೇಂದ್ರವು ಗುಜರಾತಿನಲ್ಲಿ ಭಾರೀ ಮಳೆಯನ್ನು ವರದಿ ಮಾಡಿದ್ದು,ಕಛ್ ಜಿಲ್ಲೆಯ ಮುಂದ್ರಾ ತಾಲೂಕಿನಲ್ಲಿ ಅತ್ಯಂತ ಹೆಚ್ಚು ಮಳೆಯಾಗಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಅಪರಾಹ್ನ ಎರಡು ಗಂಟೆಯ ನಡುವೆ ಅಲ್ಲಿ 26 ಮಿ.ಮೀ.ಮಳೆಯಾಗಿದ್ದು,ಗಿರ್ ಸೋಮನಾಥ್‌ನ ವೆರಾವಲ್‌ನಲ್ಲಿ 18 ಮಿ.ಮೀ.,ದೇವಭೂಮಿ ದ್ವಾರಕಾದಲ್ಲಿ 15 ಮಿ.ಮೀ. ಮತ್ತು ಕಛ್‌ನ ಅಂಜಾರ ತಾಲೂಕಿನಲ್ಲಿ 15 ಮಿ.ಮೀ.ಮಳೆ ಸುರಿದಿದೆ.
ಖೇಡಾ ಜಿಲ್ಲೆಯಲ್ಲಿ ಹೊಸದಾಗಿ ಮಳೆಯಾಗದಿದ್ದರೂ ಶೇಧಿ ನದಿಯು ಭಾಗಶಃ ಖೇಡಾ ಪಟ್ಟಣದಲ್ಲಿ ಮತ್ತು ಸಮೀಪದ 20 ಗ್ರಾಮಗಳಲ್ಲಿ ಪ್ರವಾಹವನ್ನುಂಟು ಮಾಡಿದೆ.
ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಹಲವಾರು ಪ್ರದೇಶಗಳಲ್ಲಿ ಪ್ರವಾಹದ ನೀರು ನಿಂತಿದೆ. ಭರೂಚ್ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ಧಾಧಾರ್ ನದಿಯಿಂದಾಗಿ 10 ಗ್ರಾಮಗಳು ಜಲಾವೃತಗೊಂಡಿವೆ.