ಗುಜರಾತ್ : ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಶೇ. 7ರಷ್ಟು ಏರಿಕೆ

Update: 2023-11-16 12:32 GMT

ಸಾಂದರ್ಭಿಕ ಚಿತ್ರ

ಅಹಮದಾಬಾದ್: ಗುಜರಾತ್ ನಲ್ಲಿ ವರದಿಯಾಗಿರುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಏರುಗತಿಯ ಪ್ರವೃತ್ತಿಯನ್ನು ಪ್ರದರ್ಶಿಸಿವೆ. ಈ ಅಂಕಿ-ಸಂಖ್ಯೆಯ ಪ್ರಕಾರ, ಗುಜರಾತ್ ರಾಜ್ಯವೊಂದರಲ್ಲೇ ಈ ಪ್ರಕರಣಗಳ ಸಂಖ್ಯೆ ಶೇ. 7ರಷ್ಟು ಏರಿಕೆಯಾಗಿದ್ದು, 2020-21ರಲ್ಲಿ 1095 ಇದ್ದದ್ದು, 2021-22ರಲ್ಲಿ 1,181ಕ್ಕೆ ಹಾಗೂ 2022-23ರಲ್ಲಿ ಮತ್ತೆ ಶೇ. 4.9ರಷ್ಟು ಏರಿಕೆಯಾಗುವ ಮೂಲಕ 1,239ಕ್ಕೆ ಏರಿಕೆಯಾಗಿದೆ ಎಂದು newindianexpress.com ವರದಿ ಮಾಡಿದೆ.

ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅನಂತ್ ಪಟೇಲ್ ಅವರ ಪ್ರಶ್ನೆಗೆ ಉತ್ತರಿಸಿರುವ ರಾಜ್ಯ ಗೃಹ ಇಲಾಖೆಯು, 2020-21ರಲ್ಲಿ 1,075 ಪ್ರಕರಣಗಳು, 2021-22ರಲ್ಲಿ 1,181 ಪ್ರಕರಣಗಳು ಹಾಗೂ 2022-23ರಲ್ಲಿ 1,239 ಪ್ರಕರಣಗಳು ದಾಖಲಾಗಿರುವುದನ್ನು ದೃಢಪಡಿಸಿದ್ದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು 3,515 ಪ್ರಕರಣಗಳು ವರದಿಯಾಗಿವೆ ಎಂದು ಮಾಹಿತಿ ನೀಡಿದೆ.

ಗಮನಾರ್ಹ ಸಂಗತಿಯೆಂದರೆ, ಮಹಿಳಾ ಲೈಂಗಿಕ ಕಿರುಕುಳ ಪ್ರಕರಣಗಳು ಅತೀ ಹೆಚ್ಚು ದಾಖಲಾಗಿರುವ ಪ್ರಮುಖ ನಗರ ಅಹಮದಾಬಾದ್ ಆಗಿದ್ದು, 2020-21ರಲ್ಲಿ 205 ಪ್ರಕರಣಗಳು, 2021-22ರಲ್ಲಿ 223 ಪ್ರಕರಣಗಳು ಹಾಗೂ 2022-23ರಲ್ಲಿ 220 ಪ್ರಕರಣಗಳು ವರದಿಯಾಗಿವೆ. ಇದಕ್ಕೆ ಪ್ರತಿಯಾಗಿ ಆದಿವಾಸಿಗಳ ಜಿಲ್ಲೆಯಾದ ದಂಗ್ ನಲ್ಲಿ ಅತ್ಯಂತ ಕನಿಷ್ಠ ಪ್ರಕರಣಗಳು ದಾಖಲಾಗಿದ್ದು, 2020-21ರಲ್ಲಿ 3 ಪ್ರಕರಣಗಳು, 2021-22ರಲ್ಲಿ ಶೂನ್ಯ ಪ್ರಕರಣಗಳು ಹಾಗೂ 2022-23ರಲ್ಲಿ 5 ಪ್ರಕರಣಗಳು ಮಾತ್ರ ದಾಖಲಾಗಿವೆ. ಇದೇ ಅವಧಿಯಲ್ಲಿ ತಾಪಿ ಜಿಲ್ಲೆಯಲ್ಲಿ ಕ್ರಮವಾಗಿ 2, 5, 2 ಪ್ರಕರಣಗಳು ವರದಿಯಾಗಿವೆ.

ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಗುಜರಾತ್ ಸರ್ಕಾರ ಹೇಳುತ್ತಿದ್ದರೂ, ಈ ದತ್ತಾಂಶಗಳು ಗಂಭೀರ ವಾಸ್ತವಾಂಶದತ್ತ ಬೆಳಕು ಚೆಲ್ಲಿವೆ. ಸ್ವತಃ ಗೃಹ ಸಚಿವರೇ ಸೂರತ್ ಜಿಲ್ಲೆಯವರಾಗಿದ್ದರೂ, ಆ ಜಿಲ್ಲೆಯಲ್ಲಿನ ಮಹಿಳಾ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದರ ಕುರಿತು ಅನಂತ್ ಪಟೇಲ್ ಬೊಟ್ಟು ಮಾಡಿದರು.

ಈ ಮೂರು ವರ್ಷಗಳ ಅವಧಿಯಲ್ಲಿ ಸೂರತ್ ನಲ್ಲಿ ಕ್ರಮವಾಗಿ 77, 85 ಹಾಗೂ 121 ಪ್ರಕರಣಗಳು ವರದಿಯಾಗಿವೆ. ಈ ಕುರಿತು TNIE ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಅನಂತ್ ಪಟೇಲ್, “ವರದಿಯಾಗಿರುವ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಾಗಿವೆ. ಆದರೆ, ಲೈಂಗಿಕ ಕಿರುಕುಳದ ಕುರಿತು ದೂರು ನೀಡಲು ಸಾಮಾಜಿಕ ಹಿಂಜರಿಕೆ ಇರುವುದರಿಂದ ಇನ್ನೂ ಅನೇಕ ಪ್ರಕರಣಗಳು ವರದಿಯಾಗದಿರುವ ನಿದರ್ಶನಗಳಿವೆ” ಎಂದು ತಿಳಿಸಿದ್ದಾರೆ.

ಗುಜರಾತ್ ರಾಜ್ಯ ರಾಜಧಾನಿ ಅಹಮದಾಬಾದ್ ನಲ್ಲಿ ಮಹಿಳೆಯರ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ 1,146 ದುಷ್ಕರ್ಮಿಗಳನ್ನು ಬಂಧಿಸಲಾಗಿದ್ದರೆ, 5 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ. ಸೂರತ್ ನಲ್ಲಿ 368 ಮಂದಿಯನ್ನು ಬಂಧಿಸಲಾಗಿದ್ದು, ಯಾರೂ ತಲೆಮರೆಸಿಕೊಂಡಿಲ್ಲ. ವಡೋದರದಲ್ಲಿ 217 ಮಂದಿಯನ್ನು ಬಂಧಿಸಲಾಗಿದ್ದರೆ, ಆರು ಮಂದಿ ತಲೆ ಮರೆಸಿಕೊಂಡಿದ್ದಾರೆ ಎಂಬ ಸಂಗತಿ ಗುಜರಾತ್ ವಿಧಾನಸಭೆಗೆ ಒದಗಿಸಲಾಗಿರುವ ದತ್ತಾಂಶಗಳಿಂದ ಬಹಿರಂಗಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News