ಗುಜರಾತ್: 800 ಕೋಟಿ ರೂ. ಮೌಲ್ಯದ 80 ಕೆ.ಜಿ. ಕೊಕೇನ್ ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆ
ರಾಜಕೋಟ್: ಗುಜರಾತ್ ನ ಬಂದರು ಪಟ್ಟಣ ಗಾಂಧಿಧಾಮ್ ನಿಂದ 30 ಕಿ.ಮೀ. ದೂರದಲ್ಲಿರುವ ಮಿಥಿ ರೋಹರ್ ಗ್ರಾಮದ ಸಮುದ್ರ ದಂಡೆಯಲ್ಲಿ ಪರಿತ್ಯಕ್ತ ಸ್ಥಿತಿಯಲ್ಲಿದ್ದ 80 ಕಿ.ಗ್ರಾಂ ಕೊಕೇನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದರ ಮಾರುಕಟ್ಟೆ ಮೌಲ್ಯ 800 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಖಚಿತ ಮಾಹಿತಿಯಂತೆ ಕಾರ್ಯ ಪ್ರವೃತ್ತರಾದ ಕಚ್ಛ್ (ಪೂರ್ವ) ಪೊಲೀಸರು ಕರಾವಳಿಯಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭ ಸಮುದ್ರ ದಂಡೆಯಲ್ಲಿ ಹಾಗೂ ನೀರಿನಲ್ಲಿ ಸಂದೇಹಾಸ್ಪದ 80 ಪ್ಯಾಕೇಟ್ ಗಳು ಕಂಡು ಬಂದಿದ್ದು, ಈ ಪ್ಯಾಕೇಟ್ ಗಳು 1 ಕೆ.ಜಿ. ತೂಕ ಇತ್ತು.
ವಿಧಿವಿಜ್ಞಾನ ತಜ್ಞರು ಈ ಪ್ಯಾಕೇಟ್ ನಲ್ಲಿ ಇದ್ದುದು ಕೊಕೇನ್ ಎಂಬುದನ್ನು ದೃಢಪಡಿಸಿದ್ದಾರೆ. ‘‘ಈಗ ಪತ್ತೆಯಾಗಿರುವ ಕೊಕೇನ್ ಪ್ಯಾಕೇಟ್ ಗಳು ಅಂತರ ರಾಷ್ಟ್ರೀಯ ಮಾದಕ ವಸ್ತು ಮಾಫಿಯಾದ ನೂತನ ಸಾಗಾಟ ವಿಧಾನವನ್ನು ದೃಢಪಡಿಸಿದೆ. ಅವರು ಮಾದಕ ದ್ರವ್ಯವನ್ನು ಸ್ವೀಕರಿಸುವವರಿಗೆ ನೇರವಾಗಿ ಹಸ್ತಾಂತರಿಸುವುದಿಲ್ಲ.
ಬದಲಾಗಿ ನಿರ್ಜನ ಪ್ರದೇಶದಲ್ಲಿ ತ್ಯಜಿಸುತ್ತಾರೆ. ಸ್ವೀಕರಿಸುವವರು ಅದನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ’’ ಎಂದು ಕಚ್ಛ್ (ಪೂರ್ವ)ನ ಪೊಲೀಸ್ ಅಧೀಕ್ಷಕ ಸಾಗರ್ ಬಗ್ಮಾರ್ ತಿಳಿಸಿದ್ದಾರೆ.