ಗುಜರಾತ್: ಕಸ್ಟಡಿ ಸಾವಿನ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ; ರಾಜ್ಯಕಾನೂನು ಆಯೋಗ ಕಳವಳ
ಹೊಸದಿಲ್ಲಿ: ಗುಜರಾತ್ ನಲ್ಲಿ ಕಸ್ಟಡಿ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ತೀವ್ರ ಕಳವಳಕಾರಿ ಎಂದು ರಾಜ್ಯ ಕಾನೂನು ಆಯೋಗದ ವರದಿಯು ತಿಳಿಸಿರುವುದಾಗಿ ಆಂಗ್ಲದಿನ ಪತ್ರಿಕೆಯೊಂದು ಶುಕ್ರವಾರ ವರದಿ ಮಾಡಿದೆ. 2017ರಿಂದ 2022ರವರೆಗೆ ಗುಜರಾತ್ ನಲ್ಲಿ 80 ಕಸ್ಟಡಿ ಸಾವುಗಳು ಸಂಭವಿಸಿದ್ದು, ದೇಶದಲ್ಲೇ ಇದು ಗರಿಷ್ಠವಾಗಿದೆ.
‘ಕಸ್ಟಡಿ ಸಾವಿನ ಅನಪೇಕ್ಷಣೀಯ ಘಟನೆಗಳು ನಡೆಯುವುದನ್ನು ತಡೆಯಲು ಕಾನೂನು ಜಾರಿ ಸಂಸ್ಥೆಗಳ ಮೇಲೆ ಸೂಕ್ತ ನಿಯಂತ್ರಣವನ್ನು ಹೊಂದುವ ಕುರಿತ ಸಲಹೆಗಳು’ ಎಂಬ ಶೀರ್ಷಿಕೆಯ ಈ ವರದಿಯನ್ನು ಆಯೋಗಕವು ಕಳೆದ ಜುಲೈನಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು, ಇದನ್ನೀಗ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ.
2021ರಲ್ಲಿ 9 ಕಸ್ಟಡಿ ಸಾವಿನ ಪ್ರಕರಣಗಳಿಗೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದ್ದರೆ, ಇತರ 11 ಪ್ರಕರಣಗಳಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿತ್ತೆಂದು ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಮೂರ್ತಿ ಎಂ.ಬಿ.ಶಾ ನೇತೃತ್ವದ ಸಮಿತಿಯು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಸಂಖ್ಯೆಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸುತ್ತಾ ತಿಳಿಸಿದೆ. ಆದರೆ ಇದಕ್ಕೂ ಮುನ್ನ ಒಬ್ಬನೇ ಒಬ್ಬ ಪೊಲೀಸ್ ಸಿಬ್ಬಂದಿಯ ವಿರುದ್ಧ ಕಸ್ಟಡಿ ಸಾವಿನ ಪ್ರಕರಣಗಳು ದಾಖಲಾಗಿರಲಿಲ್ಲವೆಂದು ವರದಿಯು ಬೆಟ್ಟು ಮಾಡಿದೆ.
“ಆನಂತರ ಕಸ್ಟಡಿ ಸಾವಿನ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆ ಪೈಕಿ ಎರಡು ಪ್ರಕರಣಗಳಲ್ಲಿ ದೋಷಾರೋಪ ದಾಖಲಾಗಿತ್ತು. ಒಟ್ಟಾರೆ 12 ಪೊಲೀಸರನ್ನು ಬಂಧಿಸಲಾಗಿದ್ದು, ನಾಲ್ವರ ವಿರುದ್ಧ ದೋಷಾರೋಪ ದಾಖಲಾಗಿತ್ತು ಎಂದು ವರದಿ ತಿಳಿಸಿದೆ.
ಸಂವಿಧಾನದ ಕಾರ್ಯಚೌಕಟ್ಟಿನೊಳಗೆ ಕಾರ್ಯನಿರ್ವಹಿಸುವ ಬಗ್ಗೆ ಪೊಲೀಸರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಆಯೋಗವು ಪ್ರತಿಪಾದಿಸಿದೆ. ಪೊಲೀಸ್ ಠಾಣೆಗಳಲ್ಲಿ ಹಾಗೂ ಜೈಲುಗಳಲ್ಲಿ ವೀಡಿಯೊ ಹಾಗೂ ಆಡಿಯೋ ಸೌಲಭ್ಯದ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಅದು ಒತ್ತಿ ಹೇಳಿದೆ.
ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದು, ಕೈದಿಗಳ ಆರೋಗ್ಯದ ನಿಯಮಿತ ತಪಾಸಣೆ ಹಾಗೂ ಬಂಧಿತರಿಂದ ಸಾಕ್ಷ್ಯಾಧಾರಗಳನ್ನು ಕಲೆಹಾಕುವ ಹೊಣೆಗಾರಿಕೆಯನ್ನು ತನಿಖಾ ತಂಡಗಳಿಗೆ ವಹಿಸಲಾಗಿದೆ.
2017 ಹಾಗೂ 2022ರ ನಡುವಿನ ಅವಧಿಯಲ್ಲಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತಗಳ ಪೈಕಿ ಗುಜರಾತ್ ನಲ್ಲಿ ಅತ್ಯಧಿಕ ಅಂದರೆ 80 ಕಸ್ಟಡಿ ಸಾವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿದೆ ಎಂದು ಕೇಂದ್ರ ಸರಕಾರವು ಫೆಬ್ರವರಿ 8ರಂದು ಲೋಕಸಭೆಗೆ ಕೇಂದ್ರ ಸರಕಾರ ತಿಳಿಸಿತ್ತು. ಗುಜರಾತ್ ನಲ್ಲಿ 2021-22ನೇ ಸಾಲಿನಲ್ಲಿ 24, 2020-21ರಲ್ಲಿ 17, 2019-20ರಲ್ಲಿ 12, 2018-19ರಲ್ಲಿ 13 ಹಾಗೂ 2017-18ರಲ್ಲಿ 14 ಕಸ್ಟಡಿ ಸಾವುಗಳು ದಾಖಲಾಗಿವೆ ಎಂದು ವರದಿಯಾಗಿವೆ.