ಹರ್ಯಾಣ ವಿಧಾನಸಭಾ ಚುನಾವಣೆ | ಕಾಂಗ್ರೆಸ್ ಜೊತೆ ಮೈತ್ರಿ ತೂಗುಯ್ಯಾಲೆಯಲ್ಲಿ ; ತನ್ನ 20 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಆಪ್
ಚಂಡಿಗಡ : ಅ.5ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಗಾಗಿ 20 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಆಪ್ ಸೋಮವಾರ ಬಿಡುಗಡೆಗೊಳಿಸಿದ್ದು, ಇದು ಕಾಂಗ್ರೆಸ್ ಜೊತೆ ಮೈತ್ರಿ ಮಾತುಕತೆಗಳು ಹಳಿ ತಪ್ಪಿರುವ ಸುಳಿವನ್ನು ನೀಡಿದೆ.
90 ಸದಸ್ಯರ ವಿಧಾನಸಭಾ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಸೆ.12 ಕೊನೆಯ ದಿನಾಂಕವಾಗಿದೆ.
ಆಪ್ ತನ್ನ ಹರ್ಯಾಣ ಘಟಕದ ಉಪಾಧ್ಯಕ್ಷ ಅನುರಾಗ ಧಂಡಾರನ್ನು ಕಲಾಯತ್‌ನಿಂದ, ಇಂದು ಶರ್ಮಾರನ್ನು ಭಿವಾನಿಯಿಂದ, ವಿಕಾಸ ನೆಹ್ರಾರನ್ನು ಮೇಹಮ್‌ನಿಂದ ಮತ್ತು ಬಿಜೇಂದರ್ ಹೂಡಾರನ್ನು ರೋಹ್ಟಕ್‌ನಿಂದ ಕಣಕ್ಕಿಳಿಸಿದೆ.
ರಾಜ್ಯದಲ್ಲಿ ಸಂಭಾವ್ಯ ಮೈತ್ರಿಗಾಗಿ ಆಪ್ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿದ್ದ ಮಾತುಕತೆಗಳು ಆಪ್ ಸ್ಪರ್ಧಿಸಬೇಕಾದ ಸ್ಥಾನಗಳ ಸಂಖ್ಯೆ ಕುರಿತು ಸ್ಥಗಿತಗೊಂಡಿದೆ. ಆಪ್ 10 ಸ್ಥಾನಗಳಿಗೆ ಬೇಡಿಕೆಯಿಟ್ಟಿದ್ದರೆ ಕಾಂಗ್ರೆಸ್ ಐದಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡುವುದಿಲ್ಲ ಎಂದು ಪಟ್ಟು ಹಿಡಿದಿದೆ.
ಸಂಜೆಯೊಳಗೆ ಮೈತ್ರಿ ಮಾತುಕತೆಗಳು ಅಂತಿಮಗೊಳ್ಳದಿದ್ದರೆ ತನ್ನ ಪಕ್ಷವು ಎಲ್ಲ 90 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ ಎಂದು ಆಪ್‌ನ ರಾಜ್ಯ ಘಟಕದ ಅಧ್ಯಕ್ಷ ಸುಶೀಲ್ ಗುಪ್ತಾ ಅವರು ಸೋಮವಾರ ಬೆಳಿಗ್ಗೆ ಹೇಳಿದ್ದರು.