ಹರ್ಯಾಣ: ವಿಶ್ವ ಹಿಂದೂ ಪರಿಷತ್ ನಡೆಸಿದ ರ‍್ಯಾಲಿ ಸಂದರ್ಭ ಘರ್ಷಣೆ; ಓರ್ವ ಸಾವು, ಹಲವರಿಗೆ ಗಾಯ

Update: 2023-07-31 16:46 GMT

Photo: ANI 

ಚಂಡಿಗಢ: ಹರ್ಯಾಣದ ನುಹ್ ಜಿಲ್ಲೆಯಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ನಡೆಸಿದ ರ‍್ಯಾಲಿ ಸಂದರ್ಭ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಓರ್ವ ಮೃತಪಟ್ಟಿದ್ದಾನೆ. ಪೊಲೀಸ್ ಸಿಬ್ಬಂದಿ ಸಹಿತ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಘರ್ಷಣೆಯ ಸಂದರ್ಭ ದುಷ್ಕರ್ಮಿಗಳು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಇಂಟರ್ನೆಟ್ ರದ್ದುಗೊಳಿಸಲಾಗಿದೆ ಹಾಗೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ರಾಜಸ್ಥಾನದಲ್ಲಿ ಇಬ್ಬರನ್ನು ಹತ್ಯೆಗೈದ ಪ್ರಕರಣದಲ್ಲಿ ಬೇಕಾಗಿರುವ ಬಜರಂಗದಳದ ಸದಸ್ಯ ಹಾಗೂ ನಕಲಿ ಗೋರಕ್ಷಕ ಮೋನು ಮಾನೇಸರ್ನ ಉಪಸ್ಥಿತಿ ‘ಶೋಭಾ ಯಾತ್ರೆ’ಯಲ್ಲಿ ಉದ್ವಿಗ್ನತೆ ತೀವ್ರಗೊಳ್ಳಲು ಕಾರಣವಾಯಿತು. ರ‍್ಯಾಲಿ ಸಂದರ್ಭ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಗುರುಗ್ರಾಮ-ಆಲ್ವಾರ್ ರಾಷ್ಟ್ರೀಯ ಹೆದ್ದಾರಿ ಸಮೀಪದ ನುಹ್ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸೆಲ್ಗಳನ್ನು ಸಿಡಿಸಿದರು. ‘‘ನೆರೆಯ ಜಿಲ್ಲೆಗಳಿಂದ ಹೆಚ್ಚುವರಿ ಪಡೆಗಳನ್ನು ರವಾನಿಸಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವುದು ನಮ್ಮ ಮೊದಲ ಆದ್ಯತೆ. ಎಲ್ಲರೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇವೆ’’ ಎಂದು ಹರ್ಯಾಣದ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News