ಲಿವ್ ಇನ್ ಸಂಬಂಧ ಬಯಸುತ್ತಿರುವ ವಿವಾಹಿತ ವ್ಯಕ್ತಿಗೆಳಿಗೆ ರಕ್ಷಣೆ ನೀಡಲು ಹೈಕೋರ್ಟ್ ‘ಅಸಮ್ಮತಿ’

Update: 2024-07-27 15:45 GMT

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ | PC : PTI  

ಹೊಸದಿಲ್ಲಿ : ಬೇರೆ ಸಂಗಾತಿಗಳ ಜೊತೆ ಲಿವ್- ಇನ್ ರಿಲೇಶನ್‌ಶಿಪ್ ಹೊಂದಲು ಬಯಸುತ್ತಿರುವ ವಿವಾಹಿತ ವ್ಯಕ್ತಿಗಳಿಗೆ ರಕ್ಷಣೆ ನೀಡುವುದೆಂದರೆ, ತಪ್ಪು ಮಾಡುವವರನ್ನು ಹುರಿದುಂಬಿಸಿದಂತಾಗುತ್ತದೆ ಹಾಗೂ ದ್ವಿಪತ್ನಿತ್ವ ಪದ್ದತಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಶನಿವಾರ ಅಭಿಪ್ರಾಯಿಸಿದೆ.

ತಮ್ಮ ಪಾಲಕರ ಮನೆಯಿಂದ ಓಡಿ ಬರುವ ಇಂತಹ ಜೋಡಿಗಳು ತಮ್ಮ ಕುಟುಂಬಗಳಿಗೆ ಕೆಟ್ಟ ಹೆಸರನ್ನು ತರುತ್ತಾರೆ ಮಾತ್ರವಲ್ಲ ಘನತೆ ಹಾಗೂ ಗೌರವದಿಂದ ಬದುಕು ಅವರ ಹೆತ್ತವರ ಹಕ್ಕನ್ನು ಕೂಡಾ ಉಲ್ಲಂಘಿಸುತ್ತಾರೆ ಎಂದು ನ್ಯಾಯಮೂರ್ತಿ ಸಂದೀಪ್ ಮೌದ್ಗಿಲ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಿಸಿದೆ.

ತಮ್ಮ ಕುಟುಂಬಿಕರಿಂದ ಬೆದರಿಕೆಯಿರುವ ಹಿನ್ನೆಲೆಯಲ್ಲಿ ತಮಗೆ ರಕ್ಷಣೆಯನ್ನು ಒದಗಿಸುವಂತೆ ಕೋರಿ 40 ವರ್ಷದ ಮಹಿಳೆ ಹಾಗೂ 44 ವರ್ಷದ ಪುರುಷ ಸಲ್ಲಿಸಿದ ಅರ್ಜಿಗಳ ಆಲಿಕೆಯ ಸಂದರ್ಭ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

ಈ ಜೋಡಿಯ ಪೈಕಿ ಪುರುಷನು ವಿವಾಹಿತನಾಗಿದ್ದಾನೆ ಮತ್ತು ಇಬ್ಬರಿಗೂ ಮಕ್ಕಳಿರುವ ಹೊರತಾಗಿಯೂ ಅವರು ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆಂಬ ಅಂಶವನ್ನು ನ್ಯಾಯಾಲಯವು ಪರಿಗಣಗೆ ತೆಗೆದುಕೊಂಡಿತ್ತು. ಮಹಿಳೆಯು ತನ್ನ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದರು.

ಎರಡನೇ ಅರ್ಜಿದಾರ (ಪುರುಷ) ತನ್ನ ಮೊದಲಿನ ಹೆಂಡತಿಯಿಂದ ವಿಚ್ಛೇದನವನ್ನು ಪಡೆದುಕೊಂಡಿಲ್ಲ. ಎಲ್ಲಾ ಲಿವ್ ಇನ್ ರಿಲೇಶನ್‌ಶಿಪ್‌ಗಳು ವಿವಾಹದ ಸ್ವರೂಪದಲ್ಲಿ ಇರುವುದಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಿಸಿತು.

ಒಂದು ವೇಳೆ ಅರ್ಜಿದಾರರ ನಡುವಿನ ಸಂಬಂಧವು ವಿವಾಹದ ಸ್ವರೂಪದಲ್ಲಿದ್ದಲ್ಲಿ ಅದು ಪುರುಷನ ಪತ್ನಿ ಹಾಗೂ ಮಕ್ಕಳಿಗೆ ಎಸಗುವ ಅನ್ಯಾಯವಾಗಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿತು.

ವಿವಾಹ ಹಾಗೂ ಕುಟುಂಬ ವ್ಯವಸ್ಥೆಗಳು ಮಕ್ಕಳ ಸುರಕ್ಷತೆ ಹಾಗೂ ಪಾಲನೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ವಿವಾಹ ಸಂಸ್ಕಾರವು ನೈತಿಕ ಹಾಗೂ ಕಾನೂನಾತ್ಮಕ ಬಾಧ್ಯತೆಗಳಿಗೆ ಆಸ್ಪದ ನೀಡುತ್ತದೆ ಎಂದು ನ್ಯಾಯಾಲಯ ಹೇಳಿತು.

‘‘ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿಗೂ ಶಾಂತಿ, ಘನತೆ ಹಾಗೂ ಗೌರವದಿಂದ ಬದುಕುವ ಹಕ್ಕನ್ನು ನೀಡುತ್ತದೆ. ಹೀಗಾಗಿ ಇಂತ ಅರ್ಜಿಗಳ ಆಲಿಕೆಗೆ ಆಸ್ಪದ ನೀಡಿದಲ್ಲಿ ನಾವು ತಪ್ಪು ಮಾಡುವವರನ್ನು ಹುರಿದುಂಬಿಸಿದಂತಾಗುತ್ತದೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 494 ಅಡಿ ಅಪರಾಧವೆಂದು ಪರಿಗಣಿಸಲ್ಪಟ್ಟಿರುವ ದ್ವಿಪತ್ನಿತ್ವ ಪದ್ದತಿಯನ್ನು ಪ್ರೋತ್ಸಾಹಿಸಿದಲ್ಲಿ , ಸಂವಿಧಾನದ 21ನೇ ವಿಧಿಯು ನೀಡಿರುವ ಘನತೆಯಿಂದ ಬದುಕಲು ದಾಂಪತ್ಯ ಸಂಗಾತಿಗೆ ಹಾಗೂ ಮಕ್ಕಳಿಗೆ ಇರುವ ಹಕ್ಕನ್ನು ನಿರಾಕರಿಸಿದಂತಾಗುತ್ತದೆ’’ ಎಂದು ನ್ಯಾಯಾಲಯ ಅರ್ಜಿದಾರರಿಗೆ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News