ಜು.27ರೊಳಗೆ ನ್ಯಾಯಾಲಯಕ್ಕೆ ಹಾಜರಾಗಲು ಆದಿಪುರುಷ್ ‘ಬಳಗ’ಕ್ಕೆ ಹೈಕೋರ್ಟ್ ಆದೇಶ
High Court orders Adipurush 'Balaga' to appear in court by June 27
ಹೊಸದಿಲ್ಲಿ: ವಿವಾದಾತ್ಮಕ ಚಲನಚಿತ್ರ ‘ಆದಿಪುರುಷ್’ ನ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಮಿತಿಯೊಂದನ್ನು ರಚಿಸುವಂತೆ ಅಲಹಾಬಾದ್ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ ಹಾಗೂ ಜುಲೈ 27ರಂದು ತನ್ನ ಮುಂದೆ ಹಾಜರಾಗುವಂತೆ ಚಿತ್ರದ ನಿರ್ದೇಶಕ,ನಿರ್ಮಾಪಕ ಹಾಗೂ ಸಂಭಾಷಣೆಕಾರರಿಗೆ ಸೂಚಿಸಿದೆ.
ಆದಿಪುರುಷ್ ಚಿತ್ರಕ್ಕೆ ನಿಷೇಧ ಹೇರಬೇಕೆಂದು ಕೋರಿ ಕುಲದೀಪ್ ತಿವಾರಿ ಹಾಗೂ ನವೀನ್ ಧವನ್ ಅವರನ್ನೊಳಗೊಂಡ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದರಾಜೇಶ್ ಸಿಂಗ್ ಚೌಹಾಣ್ ಹಾಗೂಶ್ರೀ ಪ್ರಕಾಶ್ ಸಿಂಗ್ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠವು ಈ ಆದೇಶವನ್ನು ನೀಡಿದೆ.
ಚಿತ್ರದ ನಿರ್ದೇಶಕ ಓಂರಾವತ್, ನಿರ್ಮಾಪಕ ಭೂಷಣ್ ಕುಮಾರ್ ಹಾಗೂ ಸಂಭಾಷಣೆ ಬರಹಗಾರ ಮನೋಜ್ ಮುಂತಾಶಿರ್ ಅವರಿಗೆ ಜುಲೈ 27ರ ಮೊದಲು ತನ್ನ ಮುಂದೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ. ಸಾರ್ವಜನಿಕರ ಭಾವನೆಗಳಿಗೆ ಇದರಿಂದ ಧಕ್ಕೆಯಾಗಿದೆಯೇ ಎಂಬ ಬಗ್ಗೆ ತನ್ನ ಅಭಿಪ್ರಾಯವನ್ನು ನೀಡಲು ಐವರು ಸದಸ್ಯರ ಸಮಿತಿಯೊಂದನ್ನು ರಚಿಸುವಂತೆಯೂ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಆದಿಪುರುಷ್ ಚಿತ್ರದ ಪ್ರದರ್ಶನಕ್ಕೆ ಪ್ರಮಾಣಪತ್ರ ನೀಡುವ ತನ್ನ ನಿರ್ಧಾರದ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಯೂ ನ್ಯಾಯಾಲಯವು ಸರಕಾರಕ್ಕೆ ಪ್ರತ್ಯೇಕ ಆದೇಶವೊಂದರಲ್ಲಿ ತಿಳಿಸಿದೆ. ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ನ ವೆಬ್‍ಸೈಟ್‍ನಲ್ಲಿ ಶುಕ್ರವಾರ ತಡರಾತ್ರಿ ಪ್ರಕಟಿಸಲಾಗಿದೆ.
ಚಿತ್ರದ ಸಾರ್ವಜನಿಕ ಪ್ರದರ್ಶನಕ್ಕಾಗಿ ಪ್ರಮಾಣಪತ್ರವನ್ನು ನೀಡುವಾಗ ಮಾರ್ಗದರ್ಶಿ ಸೂತ್ರಗಳನ್ನು ಅಕ್ಷರಶಃ ಅನುಸರಿಸಲಾಗಿದೆಯೇ ಎಂಬ ಬಗ್ಗೆ ವೈಯಕ್ತಿಕವಾಗಿ ಅಫಿಡವಿಟ್ ಗಳನ್ನು ಸಲ್ಲಿಸುವಂತೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಹಾಗೂ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ (CBFC)ಗೆ ನ್ಯಾಯಪೀಠವು ಸೂಚಿಸಿದೆ.
ಒಂದು ವೇಳೆ ಅರ್ಜಿಯ ಆಲಿಕೆ ನಡೆಯಲಿರುವ ಮುಂದಿನ ದಿನಾಂಕದೊಳಗೆ ಅಗತ್ಯವಿರುವ ಅಫಿಡವಿಟ್ಗಳನ್ನು ಸಲ್ಲಿಸದೆ ಇದ್ದಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಉಪಕಾರ್ಯದರ್ಶಿಗಿಂತ ಕೆಳಗಿನ ಶ್ರೇಣಿಯವರಲ್ಲದ 1ನೇ ದರ್ಜೆಯ ಅಧಿಕಾರಿ ಅಥವಾ ಸಿಬಿಎಫ್ಸಿಯ ಯಾವುದೇ ಜವಾಬ್ದಾರಿಯುತ ಅಧಿಕಾರಿಯು ದಾಖಲೆಗಳೊಂದಿಗೆ ತನ್ನ ಮುಂದೆ ಹಾಜರಾಗಬೇಕೆಂದು ನ್ಯಾಯಾಲಯ ತಿಳಿಸಿದೆ. ಮುಂದಿನ ವಿಚಾರಣಾ ದಿನಾಂಕದೊಳಗೆ ಚಿತ್ರದ ಕುರಿತ ತಮ್ಮ ಪ್ರಾಮಾಣಿಕ ನಿಲುವನ್ನು ಸಮರ್ಥಿಸುವ ಅಫಿಡವಿಟ್ ಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ನಿರ್ದೇಶಕ, ನಿರ್ಮಾಪಕ ಹಾಗೂ ಸಂಭಾಷಣೆ ಬರಹಗಾರರಿಗೆ ಸೂಚಿಸಿದೆ. ಆದರೆ ಅಫಿಡವಿಟ್ ಗಳನ್ನು ಸಲ್ಲಿಸುವ ಮುನ್ನ ಅವರ ವಿರುದ್ಧ ಯಾವುದೇ ದಂಡನೀಯ ಕ್ರಮವನ್ನು ಕೈಗೊಳ್ಳುವುದಾಗಲಿ ಅಥವಾ ಮಧ್ಯಂತರ ಆದೇಶವನ್ನು ಜಾರಿಗೊಳಿಸುವುದನ್ನು ತಡೆಹಿಡಿದಿರುವುದಾಗಿ ನ್ಯಾಯಾಲಯ ತಿಳಿಸಿದೆ.