ಪನ್ಸಾರೆಯ ‘ಶಿವಾಜಿ’ ಕೃತಿ ಪ್ರಸ್ತಾವಿಸಿದ ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಸೂಚಿಸಿದ ಪೊಲೀಸರಿಗೆ ಹೈಕೋರ್ಟ್ ಛೀಮಾರಿ
ಮುಂಬೈ : ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಹತ್ಯೆಯಾದ ಸಾಮಾಜಿಕ ಕಾರ್ಯಕರ್ತ ಗೋವಿಂದ ಪನ್ಸಾರೆ ಅವರ ‘ಶಿವಾಜಿ ಕೊನ್ ಹೋತಾ’ ಕೃತಿಯನ್ನು ಉಲ್ಲೇಖಿಸಿದ ಪ್ರೊಫೆಸರ್ ವಿರುದ್ಧ ಇಲಾಖಾ ಮಟ್ಟದ ಕ್ರಮವನ್ನು ಕೋರಿದ ಸತಾರಾ ಜಿಲ್ಲಾ ಪೊಲೀಸರನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದು ಯಾವ ರೀತಿಯ ಪ್ರಜಾಪ್ರಭುತ್ವವಾಗಿದೆ ಎಂದು ಅದು ಪ್ರಶ್ನಿಸಿದೆ.
2023ರ ಆಗಸ್ಟ್‌ನಲ್ಲಿ ಸತಾರಾ ಜಿಲ್ಲಾ ಪೊಲೀಸ್ ಠಾಣೆಯೊಂದರ ಸಬ್ ಇನ್ಸ್ ಪೆಕ್ಟರ್ ಅವರು ತನಗೆ ಕಳುಹಿಸಿದ ಪತ್ರವನ್ನು ಪ್ರಶ್ನಿಸಿ ಪ್ರೊಫೆಸರ್ ಡಾ. ಮಾಲಿನಿ ಅಹೆರ್ ಅವರು ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೆರೆ ಹಾಗೂ ಪೃಥ್ವಿರಾಜ್ ಕೆ.ಚವಾಣ್ ಅವರಿದ್ದ ನ್ಯಾಯಪೀಠ ನಡೆಸಿತು. ಈ ಪತ್ರವನ್ನು ನಿಶರ್ತವಾಗಿ ಹಿಂತೆಗೆದುಕೊಳ್ಳಲಾಗಿದೆಯೆಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಅರ್ಜಿಯನ್ನು ವಿಲೇವಾರಿ ಮಾಡಲಾಯಿತು.
ಕಳೆದ ವರ್ಷ ಪಾಚ್ ವಾಡದ ಯಶವಂತರಾವ್ ಕಾಲೇಜ್‌ನಲ್ಲಿ ಆಯೋಜಿಸಲಾಗಿದ್ದ ಆಗಸ್ಟ್ ಕ್ರಾಂತಿಯ ದಿನದಂದು ಉಪನ್ಯಾಸಕರೊಬ್ಬರು ಜನಾದರಣೀಯ ವ್ಯಕ್ತಿಗಳ ಬಗ್ಗೆ ಉಪನ್ಯಾಸವನ್ನು ನೀಡಿದ್ದರು. ಈ ಸಂದರ್ಭ ಅವರು ಕೆಲವು ಮಹಾನ್ ವ್ಯಕ್ತಿಗಳ ಬಗ್ಗೆ ಅಗೌರವಯುತವಾದ ಪದಗಳನ್ನು ಬಳಸಿದ್ದಾರೆಂದು ಸಭೆಯಲ್ಲಿ ವಿದ್ಯಾರ್ಥಿಗಳ ಒಂದು ಗುಂಪು ಆಕ್ರೋಶ ವ್ಯಕ್ತಪಡಿಸಿತ್ತು.
ಉಪನ್ಯಾಸದ ಸಂದರ್ಭ ಸ್ಥಳದಲ್ಲಿ ಉಪಸ್ಥಿತರಿದ್ದ ಅಹೆರ್, ಪರಿಸ್ಥಿತಿಯನ್ನು ತಿಳಿಗೊಳಿಸಲು ಪನ್ಸಾರೆಯವರ ಕೃತಿ ‘ಶಿವಾಜಿ ಕೋನ್ ಹೋತಾ’ವನ್ನು ಉಲ್ಲೇಖಿಸಿದ್ದರು. ತನ್ನ ಸಹವರ್ತಿ ಪ್ರೊಫೆಸರ್‌ನ ನಡವಳಿಕೆಯನ್ನು ಖಂಡಿಸುವ ಬದಲು ಆತನನ್ನು ಅಹೆರ್ ಬೆಂಬಲಿಸುತ್ತಿದ್ದಾರೆಂದು ಆರೋಪಿಸಿ, ಆಕೆಯ ಮೇಲೂ ವಾಗ್ದಾಳಿ ನಡೆಸಿದರು. ಆಗ ಸ್ಥಳದಲ್ಲಿದ್ದ ಇನ್ಸ್ ಪೆಕ್ಟರ್ ಅವರು ಪ್ರೊಫೆಸರ್ ಅಹೆರ್ ವಿರುದ್ಧ ಇಲಾಖಾ ಮಟ್ಟದ ತನಿಖೆ ನಡೆಸುವಂತೆ ಪ್ರಾಂಶುಪಾಲರಿಗೆ ಸೂಚಿಸಿದ್ದರು ಹಾಗೂ ಈ ಬಗ್ಗೆ ಲಿಖಿತ ಪತ್ರವನ್ನು ಬರೆದಿದ್ದರು. ಆದರೆ ಇಲಾಖಾ ಮಟ್ಟದ ತನಿಖೆ ನಡೆಸುವಂತೆ ಸೂಚಿಸುವ ಅಧಿಕಾರ ಇನ್ಸ್‌ಪೆಕ್ಟರ್‌ಗೆ ಇರುವುದಿಲ್ಲವೆಂದು ಅಹೆರ್ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.
ಅರ್ಜಿಯ ಆಲಿಕೆ ನಡೆಸಿದ ನ್ಯಾಯಾಲಯವು ಪನ್ಸಾರೆಯವರ ಕೃತಿಯನ್ನು ತಾವು ಓದಿರುವಿರಾ. ಅರ್ಜಿದಾರಿಗೆ ವಾಕ್ ಸ್ವಾತಂತ್ರ್ಯವಿರುವ ಹೊರತಾಗಿಯೂ ಅವರು ನೀಡಿರುವ ಹೇಳಿಕೆ ಅಸಭ್ಯವಾದುದೇ ಎಂದು ನ್ಯಾಯಾಲಯವು ಇನ್ಸ್ ಪೆಕ್ಟರ್ ಅವರನ್ನು ಪ್ರಶ್ನಿಸಿತ್ತು. ಅಲ್ಲದೆ ಇನ್ಸ್ ಪೆಕ್ಟರ್ ಅವರು ತನ್ನ ಅಧಿಕಾರವ್ಯಾಪ್ತಿಯನ್ನು ಮೀರಿ ಪ್ರೊಫೆಸರ್ ವಿರುದ್ಧ ಕಾನೂನುಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸುವಂತಿಲ್ಲವೆಂದು ತಾಕೀತು ಮಾಡಿತು.
ಸತಾರಾ ಜಿಲ್ಲಾ ಪೊಲೀಸರು ಪ್ರಾಂಶುಪಾಲರಿಗೆ ಬರೆದಿರುವ ಪತ್ರವನ್ನು ನಿಶರ್ತವಾಗಿ ಹಿಂತೆಗೆದುಕೊಳ್ಳಲಾಗಿದೆಯೆಂದು ಪ್ರಾಸಿಕ್ಯೂಶನ್ ತಿಳಿಸಿದ ಬಳಿಕ ಅರ್ಜಿಯನ್ನು ವಿಲೇವಾರಿ ಮಾಡಲಾಯಿತು.