ಹಿಮಾಚಲ ಬಿಕ್ಕಟ್ಟು ಶಮನಕ್ಕೆ ʼಟ್ರಬಲ್‌ಶೂಟರ್‌ʼ ಡಿ.ಕೆ. ಶಿವಕುಮಾರ್‌ ಮೊರೆ ಹೋದ ಕಾಂಗ್ರೆಸ್‌

Update: 2024-02-28 11:03 GMT

ಡಿ ಕೆ ಶಿವಕುಮಾರ್‌ (PTI)

ಶಿಮ್ಲಾ: ಹಿಮಾಚಲ ಪ್ರದೇಶ ಕಾಂಗ್ರೆಸ್‌ ಎದುರಿಸುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್‌ ಪಕ್ಷದ ಟ್ರಬಲ್‌ಶೂಟರ್‌ ಎಂದೇ ಖ್ಯಾತಿ ಪಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಸಹಾಯವನ್ನು ಪಕ್ಷದ ನಾಯಕತ್ವ ಕೋರಿದೆ.

ರಾಜ್ಯ ವಿಧಾನಸಭೆಯಲ್ಲಿ ಬಹುಮತವಿರುವ ಹೊರತಾಗಿಯೂ ಹಿಮಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನವನ್ನು ಪಕ್ಷ ಕಳೆದುಕೊಂಡ ನಂತರದ ಬೆಳವಣಿಗೆ ಇದಾಗಿದೆ.

ಆಡಳಿತ ಕಾಂಗ್ರೆಸ್‌ ಪಕ್ಷದ ಹಲವು ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆ ಹಾಗೂ ಶೀಘ್ರದಲ್ಲಿಯೇ ಅಲ್ಲಿ ಸರ್ಕಾರ ರಚಿಸುವುದಾಗಿ ಬಿಜೆಪಿ ಹೇಳಿಕೊಂಡಿದೆ.

ಈ ನಡುವೆ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಕ್ಕು ತಾವು ತಮ್ಮ ಸರ್ಕಾರದ ಬಹುಮತವನ್ನು ಸದನದಲ್ಲಿ ಸಾಬೀತುಪಡಿಸುವುದಾಗಿ ಹೇಳಿದ್ದಾರೆ. “ಯಾರೂ ನನ್ನ ರಾಜೀನಾಮೆ ಕೇಳಿಲ್ಲ ನಾನು ರಾಜೀನಾಮೆಯನ್ನೂ ನೀಡುವುದಿಲ್ಲ. ನಾವು ಬಹುಮತ ಸಾಬೀತುಪಡಿಸುತ್ತೇವೆ. ನಾವು ಗೆಲ್ಲುತ್ತೇವೆ. ಹಿಮಾಚಲದ ಜನರು ಗೆಲ್ಲುತ್ತಾರೆ,” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದಾರೆಂಬ ವದಂತಿಗಳನ್ನು ಬಿಜೆಪಿ ಹರಡುತ್ತಿದೆ ಎಂದು ಸುಖ್ವಿಂದರ್‌ ಸಿಂಗ್‌ ಸುಕ್ಕು ಹೇಳಿದ್ದಾರೆ.

“ಕಾಂಗ್ರೆಸ್‌ ಒಗ್ಗಟ್ಟಿನಲ್ಲಿದೆ. ಬಿಜೆಪಿಗೆ ಮತ ಹಾಕಿದ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ,” ಎಂದು ಅವರು ಹೇಳಿದ್ದಾರೆ.

ಶಾಸಕರು ಅಡ್ಡಮತದಾನ ಹೇಗೆ ಮಾಡಿದರೆಂದು ತಿಳಿದುಕೊಂಡು ಪಕ್ಷ ಸಂಬಂಧಿತರನ್ನು ಜವಾಬ್ದಾರರನ್ನಾಗಿಸಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕ ಹಾಗೂ ಮಾಜಿ ಸೀಎಂ ದಿವಂಗತ ವೀರಭದ್ರ ಸಿಂಗ್‌ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್‌ ತಮ್ಮ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಿಮಾಚಲ ಸರ್ಕಾರದಲ್ಲಿ ಶಾಸಕರ ದನಿಗಳನ್ನು ಅದುಮಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ವಿಕ್ರಮಾದಿತ್ಯ ಸಿಂಗ್‌ ತಾವು ರಾಜ್ಯ ಸರ್ಕಾರದಿಂದ ಭಾವನಾತ್ಮಕವಾಗಿ ನೊಂದಿರುವುದಾಗಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News