ಕೊಪ್ಪಳದಲ್ಲಿ ಇಸ್ರೇಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಫೆಲೆಸ್ತೀನ್ ಬಣ್ಣ ಹಚ್ಚಿದ್ದ ಬಲಪಂಥೀಯರು

Update: 2025-03-10 14:47 IST
ಕೊಪ್ಪಳದಲ್ಲಿ ಇಸ್ರೇಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಫೆಲೆಸ್ತೀನ್ ಬಣ್ಣ ಹಚ್ಚಿದ್ದ ಬಲಪಂಥೀಯರು
  • whatsapp icon

ಬೆಂಗಳೂರು: ರಾಜ್ಯದ ಕೊಪ್ಪಳ ಜಿಲ್ಲೆಯ ಗಂಗಾವತಿಯ ಸನಾಪುರ ಸರೋವರದ ಬಳಿ 27 ವರ್ಷದ ಇಸ್ರೇಲಿ ಪ್ರವಾಸಿ ಮತ್ತು ಹೋಂಸ್ಟೇ ಮಾಲಕಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ನಡೆದ ಕ್ರೂರ ಹಲ್ಲೆ ಮತ್ತು ಸಾಮೂಹಿಕ ಅತ್ಯಾಚಾರದ ಸುದ್ದಿ ಬೆಳಕಿಗೆ ಬಂದ ಕೂಡಲೇ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರತೀಯ ಮುಸ್ಲಿಮರ ವಿರುದ್ಧ ಬಲಪಂಥೀಯ ಖಾತೆಗಳಿಂದ ಅಪಾಯಕಾರಿ ದ್ವೇಷ ಅಭಿಯಾನ ನಡೆದಿದೆ.

ಬಲಪಂಥೀಯ X ಖಾತೆಗಳು ಇಸ್ರೇಲಿ ಮಹಿಳೆಯ ಮೇಲಿನ ಅತ್ಯಾಚಾರವನ್ನು ಮಾತ್ರ ಉಲ್ಲೇಖಿಸಿ, ಪ್ರಕರಣಕ್ಕೆ ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ತಕ್ಷಣವೇ ಥಳುಕು ಹಾಕಿವೆ.

ಫೆಲೆಸ್ತೀನ್ ನಲ್ಲಿನ ಮುಸ್ಲಿಂ ಸಹೋದರರ ಕಾರಣಕ್ಕಾಗಿ ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳುವ ಕ್ರಮವಾಗಿ ಭಾರತೀಯ ಮುಸ್ಲಿಮರು ಈ ಅಪರಾಧವನ್ನು ಮಾಡಿದ್ದಾರೆ ಎಂದು ಕೆಲವು ಬಲಪಂಥೀಯರು ಹೇಳಿಕೊಂಡಿದ್ದಾರೆ.

ವಿಶೇಷವೆಂದರೆ ಬಹುತೇಕ ಈ ಕುರಿತ ಪೋಸ್ಟ್ ಮಾಡಿರುವ ಖಾತೆಗಳು ಅದೇ ಮಾಹಿತಿಯನ್ನು ಕಾಪಿ ಪೇಸ್ಟ್ ಮಾಡಿದ್ದಾರೆ. ಹಲವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿ, ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ಮೊದಲು ಈ ರೀತಿಯ ಪೋಸ್ಟ್ ಅನ್ನು ಹಿಂದುತ್ವದ ಪ್ರಭಾವಿ ಪ್ರಚಾರಕ ಸಿನ್ಹಾ (@MrSinha_) ಬರೆದಿದ್ದಾರೆ. ದಾರಿತಪ್ಪಿಸುವ ಸುದ್ದಿಗಳನ್ನು ಪ್ರಸಾರ ಮಾಡುವ ಮತ್ತು ಪ್ರಚಾರ ಮಾಡುವಲ್ಲಿ ಅವರು ಕುಖ್ಯಾತರಾಗಿದ್ದಾರೆ.

ಸಿನ್ಹಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದಿರುವ ಪೋಸ್ಟ್ ನಲ್ಲಿ , "ಕರ್ನಾಟಕದಲ್ಲಿ ಇಸ್ರೇಲಿ ಪ್ರವಾಸಿ ಮತ್ತು ಒಡಿಶಾದ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಇತರ ಮೂವರು ಪುರುಷರ ಮೇಲೆ ಹಲ್ಲೆ ನಡೆಸಲಾಗಿದೆ. ಅವರಲ್ಲಿ ಒಬ್ಬನ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದೆ. ಪ್ರಕರಣದಲ್ಲಿ ಇಸ್ರೇಲಿ ಪ್ರಜೆ ಸಂತ್ರಸ್ತೆಯಾಗಿರುವುದರಿಂದ, ಫೆಲೆಸ್ತೀನ್ ಪರ ಅಂಶಗಳ ಭಾಗೀದಾರಿಕೆಯನ್ನು ನಿರಾಕರಿಸಲಾಗದು. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಮುಚ್ಚಿಕಾಕಬಹುದು. @HMOIndia ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು", ಎಂದು ತಿಳಿಸಿದ್ದಾರೆ.

ಸಿನ್ಹಾ ಅವರ ಸುಳ್ಳು ಹೇಳಿಕೆಗಳು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಹಲವಾರು ಜನರಿಗೆ ಪ್ರಚೋದನೆ ನೀಡಿವೆ. ಕೆಲವು ಬಳಕೆದಾರರು ಭಾರತೀಯ ಮುಸ್ಲಿಮರ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹಾಯ್ದಿದ್ದಾರೆ.

 

 

 

 

ಸಿನ್ಹಾ ಪೋಸ್ಟ್‌ಗಳು ಇಸ್ರೇಲ್‌ನೊಂದಿಗಿನ ಭಾರತದ ಉತ್ತಮ ಸಂಬಂಧವನ್ನು ಹಾಳುಮಾಡಲು ಭಾರತೀಯ ಮುಸ್ಲಿಮರು ಪಿತೂರಿ ನಡೆಸುತ್ತಿದ್ದಾರೆ ಎಂದು ಜನಸಾಮಾನ್ಯರನ್ನು ನಂಬುವಂತೆ ಮಾಡಿತು. ಈ ಆತಂಕಕಾರಿ ಅಭಿಯಾನವು ಕಾಡ್ಗಿಚ್ಚಿನಂತೆ ಹರಡಿತು. ಸಿನ್ಹಾ ಪೋಸ್ಟ್ ಗೆ ಬಂದ ನೂರಾರು ಕಮೆಂಟ್‌ಗಳು, ಭಾರತೀಯ ಮುಸ್ಲಿಮರನ್ನು ಗಡೀಪಾರು ಮಾಡಬೇಕು, ಹತ್ಯೆ ಮಾಡಬೇಕು ಎಂದು ಹೇಳಿವೆ.

ಸತ್ಯಾಂಶವೇನು?:

ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸಿಯ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ರವಿವಾರ ಹೇಳಿದ್ದಾರೆ. ಮೂವರು ವ್ಯಕ್ತಿಗಳು ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಮಾರ್ಚ್ 8 ರಂದು ಇಬ್ಬರನ್ನು ಬಂಧಿಸಲಾಗಿದ್ದರೆ, ಮೂರನೇ ಆರೋಪಿಯನ್ನು ರವಿವಾರ ಬಂಧಿಸಲಾಗಿದೆ.

ಈ ಹಿಂದೆ ಬಂಧಿಸಲಾದ ಇಬ್ಬರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನಿವಾಸಿಗಳಾದ 22 ವರ್ಷದ ಮಲ್ಲೇಶ್ ಅಲಿಯಾಸ್ ಹಂದಿ ಮಲ್ಲ ಮತ್ತು 21 ವರ್ಷದ ಚೇತನ್ ಸಾಯಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಮೂರನೇ ಆರೋಪಿ ಸಾಯಿರಾಂ ಎಂಬಾತನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದ್ದು, ಅಪರಾಧದ ನಂತರ ಆತ ಪರಾರಿಯಾಗಿದ್ದ ಎನ್ನಲಾಗಿದೆ.

ಮಾರ್ಚ್ 6 ರ ಗುರುವಾರ ರಾತ್ರಿ ಕರ್ನಾಟಕದ ಕೊಪ್ಪಳದಲ್ಲಿ ಇಸ್ರೇಲಿ ಪ್ರವಾಸಿ ಮಹಿಳೆ ಮತ್ತು ಹೋಂಸ್ಟೇ ಮಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ತುಂಗಭದ್ರಾ ಎಡದಂಡೆ ಕಾಲುವೆಯ ಬಳಿ ರಾತ್ರಿ 10:30 ರ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆಯರೊಂದಿಗೆ ಅಮೆರಿಕ ಮತ್ತು ಮಹಾರಾಷ್ಟ್ರ ಮತ್ತು ಒಡಿಶಾದ ಒಟ್ಟು ಮೂವರು ಪ್ರವಾಸಿಗರು ಇದ್ದರು ಎಂದು ತಿಳಿದು ಬಂದಿದೆ.

ಬೈಕ್ ನಲ್ಲಿ ಬಂದ ಆರೋಪಿಗಳು, ಆರಂಭದಲ್ಲಿ ಪೆಟ್ರೋಲ್ ಬಂಕ್‌ಗೆ ದಾರಿ ಕೇಳಿದರು ಎನ್ನಲಾಗಿದೆ. ನಂತರ ಇಸ್ರೇಲಿ ಮಹಿಳೆಯಿಂದ 100 ರೂ.ಗಳಿಗೆ ಬೇಡಿಕೆ ಇಟ್ಟರು. ಆಗ ಪ್ರವಾಸಿಗರು ನಿರಾಕರಿಸಿದಾಗ, ವಾಗ್ವಾದ ನಡೆದು ಘರ್ಷಣೆ ನಡೆದಿದೆ ಎಂದು ತಿಳಿದು ಬಂದಿದೆ.

ಬಳಿಕ, ಮಹಿಳೆಯರನ್ನು ಗುರಿಯಾಗಿಸಿಕೊಂಡ ಆರೋಪಿಗಳು ಮೂವರು ಪುರುಷ ಪ್ರವಾಸಿಗರನ್ನು ಕಾಲುವೆಗೆ ತಳ್ಳಿದರು. ಅತ್ಯಾಚಾರ ಎಸಗಿದ ಬಳಿಕ , ಆರೋಪಿಗಳು ತಮ್ಮ ಬೈಕ್ ನಲ್ಲಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News