ಪಶ್ಚಿಮ ಬಂಗಾಳ | ರಾಜಭವನದ ಘನತೆಗೆ ಚ್ಯುತಿ ; ಪೊಲೀಸ್ ಆಯುಕ್ತ ಹಾಗೂ ಡಿಸಿಪಿ ವಿರುದ್ಧ ಗೃಹ ಸಚಿವಾಲಯದಿಂದ ಶಿಸ್ತು ಕ್ರಮ

Update: 2024-07-07 14:18 GMT

Photo Credit: PTI 

ಕೋಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯಪಾಲರ ಕಚೇರಿಯ ವಿರುದ್ಧ ಸುಳ್ಳು ವದಂತಿಗಳನ್ನು ಹರಡಲಾಗುತ್ತಿದೆ ಎಂಬ ಆರೋಪದಡಿ ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಹಾಗೂ ಓರ್ವ ಉಪ ಪೊಲೀಸ್ ಆಯುಕ್ತರ ವಿರುದ್ಧ ಶಿಸ್ತು ಕ್ರಮಕ್ಕೆ ಕೇಂದ್ರ ಗೃಹ ಸಚಿವಾಲಯ ಚಾಲನೆ ನೀಡಿದೆ ಎಂದು ಕೇಂದ್ರ ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಹಾಗೂ ಕೋಲ್ಕತ್ತಾ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಇಂದಿರಾ ಮುಖರ್ಜಿ ಸಾರ್ವಜನಿಕ ಸೇವಕರಾಗಲು ಅನರ್ಹರು ಎಂಬಂತೆ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ಆರೋಪಿಸಿ, ಅವರ ವಿರುದ್ಧ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ ನಂತರ ಕೇಂದ್ರ ಗೃಹ ಸಚಿವಾಲಯ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರು ನನ್ನನ್ನು ಭೇಟಿಯಾಗಲು ಅಗತ್ಯ ಅನುಮತಿಯನ್ನು ನೀಡಿದ ಹೊರತಾಗಿಯೂ ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳು ಅವರಿಗೆ ನನ್ನನ್ನು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಕಳೆದ ಜೂನ್ ತಿಂಗಳಲ್ಲಿ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಕೇಂದ್ರ ಗೃಹ ಸಚಿವರಿಗೆ ವರದಿ ಸಲ್ಲಿಸಿದ್ದರು.

"ಪಶ್ಚಿಮ ಬಂಗಾಳ ರಾಜ್ಯಪಾಲರು ಐಪಿಎಸ್ ಅಧಿಕಾರಿಗಳ ವಿರುದ್ಧ ಸಲ್ಲಿಸಿದ ವಿಸ್ತೃತ ವರದಿಯನ್ನು ಆಧರಿಸಿ, ಅವರ ವಿರುದ್ಧ ಕೇಂದ್ರ ಗೃಹ ಸಚಿವಾಲಯವು ಶಿಸ್ತು ಕ್ರಮಕ್ಕೆ ಚಾಲನೆ ನೀಡಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News