ಸಂಸತ್ತಿಗೆ ಸಂದರ್ಶಕರ ಪಾಸ್ ಪಡೆಯುವ ಪ್ರಕ್ರಿಯೆ ಹೇಗೆ?: ಇಲ್ಲಿದೆ ವಿವರ

Update: 2023-12-13 11:47 GMT

Photo: PTI

ಹೊಸದಿಲ್ಲಿ: ಇಂದು ಲೋಕಸಭೆಯಲ್ಲಿ ನಡೆದ ಘಟನೆಯಲ್ಲಿ ಸಂದರ್ಶಕರ ಗ್ಯಾಲರಿಯಲ್ಲಿದ್ದ ಇಬ್ಬರು ಬಣ್ಣದ ಹೊಗೆ ಸೂಸುತ್ತಿದ್ದ ಕ್ಯಾನಿಸ್ಟರ್ಗಳೊಂದಿಗೆ ಗ್ಯಾಲರಿಯಿಂದ ಕೆಳಕ್ಕೆ ಜಿಗಿದು ಭಯದ ವಾತಾವರಣ ಸೃಷ್ಟಿಸಿದ ಬೆಳವಣಿಗೆಯ ನಡುವೆ, ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸಲು ಸಂದರ್ಶಕರ ಪಾಸುಗಳನ್ನು ಹೇಗೆ ನೀಡಲಾಗುತ್ತಿದೆ ಎಂಬ ಕುರಿತು ಸಾಕಷ್ಟು ಕುತೂಹಲವಿದೆ. ಇಂದಿನ ಘಟನೆಯ ನಂತರ ಸಂದರ್ಶಕರ ಪಾಸ್ ನೀಡಿಕೆ ಸ್ಥಗಿತಗೊಳಿಸುವಂತೆಯೂ ಆದೇಶಿಸಲಾಗಿದೆ.

ಅಷ್ಟಕ್ಕೂ ಸಂದರ್ಶಕರ ಪಾಸುಗಳನ್ನು ನೀಡುವ ಪ್ರಕ್ರಿಯೆ ಹೀಗಿದೆ.

►ಸಂಸತ್ತಿಗೆ ಭೇಟಿ ನೀಡಲು ಬಯಸುವವರು ಮೊದಲು ತಮ್ಮ ಕ್ಷೇತ್ರದ ಸಂಸದರಿಗೆ ಮನವಿ ಸಲ್ಲಿಸುತ್ತಾರೆ.

►ಯಾವ ಸಂಸದರ ಶಿಫಾರಸಿನ ಮೇಲೆ ಪಾಸ್ ನೀಡಲಾಗುವುದೋ ಆ ಸಂಸದರು ತಮಗೆ ಮನವಿ ಸಲ್ಲಿಸಿದವರ ಹಿನ್ನೆಲೆ ಪರಿಶೀಲನೆಯನ್ನು ಮಾಡಿರುತ್ತಾರೆ ಹಾಗೂ ಅವರ ಗುರುತು ಕಾರ್ಡ್ಗಳನ್ನೂ ಪರಿಶೀಲಿಸುತ್ತಾರೆ.

►ಪಾಸುಗಳನ್ನು ಪಡೆದವರು ನಂತರ ಕಟ್ಟುನಿಟ್ಟಿನ ಭದ್ರತಾ ತಪಾಸಣೆಗೆ ಒಳಗಾಗುತ್ತಾರೆ. ಸಂಸತ್ತಿನ ಭದ್ರತಾ ಸಿಬ್ಬಂದಿ ತಪಾಸಣೆ ನಂತರ ಹಾಗೂ ಸಂಸತ್ತಿನ ಪ್ರವೇಶದ್ವಾರದಲ್ಲಿರುವ ಎಲೆಕ್ಟ್ರಾನಿಕ್ ಯಂತ್ರದ ಮೂಲಕ ಅವರು ಹಾದು ಹೋಗಬೇಕಿದೆ.

ಬಂಧಿತರಲ್ಲೊಬ್ಬನಾದ ಸಾಗರ್ ಶರ್ಮಾಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಮುಖಾಂತರ ಪಾಸ್ ದೊರಕಿದೆ ಎಂದು ತಿಳಿದು ಬಂದಿದೆ. ಸಾಗರ್ ಹಾಗೂ ಇನ್ನೊಬ್ಬಾತ ಕ್ಯಾನಿಸ್ಟರ್ಗಳನ್ನು ಹಿಡಿದುಕೊಂಡು ಪ್ರವೇಶಿಸುವುದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಎದ್ದಿದೆ.

ಸಂಸತ್ತಿನಲ್ಲಿ ಇಂದು ನಡೆದ ದೊಡ್ಡ ಭದ್ರತಾ ಬಂಧಿತರಾದ ಇಬ್ಬರು ವ್ಯಕ್ತಿಗಳು ಮೈಸೂರು ಮೂಲದವರೆಂದು ತಿಳಿದು ಬಂದಿದ್ದು, ಅವರನ್ನು ಸಾಗರ್ ಶರ್ಮ ಮತ್ತು ಮನೋರಂಜನ್ ಎಂದು ಗುರುತಿಸಲಾಗಿದೆ.

ಸಂಸತ್ತಿನ ಹೊರಗೆ ಹಳದಿ ಹೊಗೆಯುಗುಳುತ್ತಿದ್ದ ಕ್ಯಾನಿಸ್ಟರ್ ಹಿಡಿದುಕೊಂಡು ಪ್ರತಿಭಟಿಸುತ್ತಿದ್ದ ಓರ್ವ ಮಹಿಳೆ ಮತ್ತು ಪುರುಷನನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News