ಜಮ್ಮುಕಾಶ್ಮೀರ: ಹುರಿಯತ್ ವರಿಷ್ಠನಿಗೆ ಗೃಹ ಬಂಧನ

Update: 2025-03-14 20:26 IST
ಜಮ್ಮುಕಾಶ್ಮೀರ: ಹುರಿಯತ್ ವರಿಷ್ಠನಿಗೆ ಗೃಹ ಬಂಧನ

Photo : Mirwaiz Farooq/Facebook

  • whatsapp icon

ಶ್ರೀನಗರ: ಹುರಿಯತ್ ಕಾನ್ಫರೆನ್ಸ್ ನ ಅಧ್ಯಕ್ಷ ಮಿರ್ವೈಝ್ ಉಮರ್ ಫಾರೂಕ್ ಅವರನ್ನು ಶುಕ್ರವಾರ ಗೃಹ ಬಂಧನದಲ್ಲಿ ಇರಿಸಲಾಯಿತು. ಅಲ್ಲದೆ ಅವರು ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರದ ಮುಖ್ಯ ಧರ್ಮಗುರು ಆಗಿರುವ ಮಿರ್ವೈಝ್ ಅವರನ್ನು ಶ್ರೀನಗರದ ನಾಗೀನ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಗೃಹ ಬಂಧನದಲ್ಲಿ ಇರಿಸಲಾಯಿತು ಎಂದು ಅವರು ಹೇಳಿದ್ದಾರೆ.

ಹುರಿಯತ್ ಮುಖ್ಯಸ್ಥ ಮಿರ್ವೈಝ್ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ನೌಹಟ್ಟಾ ಪ್ರದೇಶದಲ್ಲಿರುವ ಜಾಮಿಯಾ ಮಸೀದಿಗೆ ಭೇಟಿ ನೀಡಲು ನಿರ್ಧರಿಸಿದ್ದರು.

ಕೇಂದ್ರ ಸರಕಾರ ಈ ವಾರದ ಆರಂಭದಲ್ಲಿ ಮಿರ್ವೈಝ್ ನೇತೃತ್ವದ ಅವಾಮಿ ಆ್ಯಕ್ಷನ್ ಕಮಿಟಿ (ಎಎಸಿ) ಹಾಗೂ ಶಿಯಾ ನಾಯಕ ಮಸ್ರೂರ್ ಅಬ್ಬಾಸ್ ಅನ್ಸಾರಿ ನೇತೃತ್ವದ ಜಮ್ಮು ಕಾಶ್ಮೀರ್ ಇತ್ತಿಹಾದುಲ್ ಮುಸ್ಲಿಮೀನ್ (ಜೆಕೆಐಎಂ)ನ ಮೇಲೆ 5 ವರ್ಷಗಳ ನಿಷೇಧ ಹೇರಿದೆ. ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಗೆ ಬೆಂಬಲ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಪ್ರಚೋದನೆ ಆರೋಪದಲ್ಲಿ ಈ ನಿಷೇಧ ಹೇರಲಾಗಿದೆ.

ಮಿರ್ವೈಝ್ ಅವರ ಗೃಹಬಂಧನವನ್ನು ಜಾಮಿಯಾ ಮಸೀದಿಯ ಆಡಳಿತ ಮಂಡಳಿ ಅಂಜುಮನ್ ಔಕಾಫ್ ಜಮಾ ಮಸೀದಿ ಖಂಡಿಸಿದೆ.

ಅದು ತನ್ನ ಹೇಳಿಕೆಯಲ್ಲಿ, ‘‘ವಿಶ್ವಾದ್ಯಂತ ಮುಸ್ಲಿಮರಿಗೆ ಅಗಾಧ ಆಧ್ಯಾತ್ಮಿಕ ಮಹತ್ವದ ತಿಂಗಳಾದ ಪವಿತ್ರ ರಮಝಾನ್ನಲ್ಲಿ ಅಧಿಕಾರಿಗಳು ನಿರಂಕುಶವಾಗಿ ಹಾಗೂ ಅಸಮರ್ಥನೀಯವಾಗಿ ನಡೆದುಕೊಂಡಿದ್ದಾರೆ’’ ಎಂದು ಹೇಳಿದೆ.

ತನ್ನ ಧಾರ್ಮಿಕ ಕರ್ತವ್ಯವನ್ನು ಈಡೇರಿಸದಂತೆ ಮಿರ್ವೈಝ್ ಅವರನ್ನು ತಡೆದಿರುವುದು ಹಾಗೂ ಅವರ ಧರ್ಮೋಪದೇಶಗಳಿಂದ ಪ್ರಯೋಜನ ಪಡೆಯುವುದನ್ನು ನಿರ್ಬಂಧಿಸಿರುವುದು ಜನರ ಧಾರ್ಮಿಕ ಭಾವನೆಗಳಿಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಔಕಾಫ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News