ಗುಂಡೇಟಿನಿಂದ ಗಾಯಗೊಂಡಿದ್ದ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದೆ, ನನ್ನ ತಮ್ಮ ಅಲ್ಲಿ ಮೊದಲೇ ದಾಖಲಾಗಿದ್ದ
ಹಲ್ದ್ವಾನಿ (ಉತ್ತರಾಖಂಡ : ಹಲ್ದ್ವಾನಿಯ ಬನಭೂಲಪುರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಇತ್ತೀಚಿನ ಹಿಂಸಾಚಾರದ ಬಳಿಕ ಆತಂಕ ಮನೆ ಮಾಡಿದೆ. ಜನರು ತಮ್ಮ ಮನೆಗಳಲ್ಲಿಯೇ ದಿಗ್ಬಂಧನದಲ್ಲಿದ್ದಾರೆ, ಇಂಟರ್ನೆಟ್ ಸ್ಥಗಿತಗೊಂಡಿದೆ. ಪೋಲಿಸರ ಚಲನವಲನದ ಕೊಂಚ ವಾಸನೆ ಹೊಡೆದರೂ ಜನರು ತಕ್ಷಣ ತಮ್ಮ ಮನೆಗಳ ಬಾಗಿಲು ಮತ್ತು ಕಿಟಕಿಗಳನ್ನು ಭದ್ರಪಡಿಸುತ್ತಿದ್ದಾರೆ. ಗುರುವಾರ ಪ್ರದೇಶದಲ್ಲಿಯ ಮಸೀದಿ ಮತ್ತು ಮದರಸಗಳ ನೆಲಸಮ ಕಾರ್ಯಾಚರಣೆ ಹಿಂಸಾಚಾರಕ್ಕೆ ತಿರುಗಿತ್ತು.
ಜಿಲ್ಲಾಡಳಿತವು ಒದಗಿಸಿರುವ ಮಾಹಿತಿಯಂತೆ ಮೃತರನ್ನು ಹಲ್ದ್ವಾನಿ ನಿವಾಸಿಗಳಾದ ಫಾಹೀಂ ಕುರೇಶಿ(30), ಝಾಹಿದ್ (45),ಅವರ ಪುತ್ರ ಮುಹಮ್ಮದ್ ಅನಾಸ್ (16),ಮುಹಮ್ಮದ್ ಶಾಬಾನ್ (22) ಮತ್ತು ಬಿಹಾರ ನಿವಾಸಿ ಪ್ರಕಾಶ ಕುಮಾರ ಸಿಂಗ್ (24) ಎಂದು ಗುರುತಿಸಲಾಗಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅನಾಸ್ನ ಸೋದರ ಮುಹಮ್ಮದ್ ಅಮಾನ್ ಅಂದು ನಡೆದಿದ್ದನ್ನು ನೆನಪಿಸಿಕೊಂಡರು. ಹಿಂಸಾಚಾರ ಸ್ಫೋಟಗೊಳ್ಳುವ ಮುನ್ನ ಅಮಾನ್ ಮತ್ತು ಅವರ ತಂದೆ ಝಾಹಿದ್ ಹುಸೇನ್ ನಿರ್ಮಾಣ ಸ್ಥಳವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಮಾನ್ ಮನೆಗೆ ಮರಳಿದ್ದರೆ ಕೆಲವು ಕೆಲಸಗಳನ್ನು ಮುಗಿಸಲು ಝಾಹಿದ್ ಅಲ್ಲಿಯೇ ಉಳಿದಿದ್ದರು.
‘ಹಿಂಸಾಚಾರದ ಸುದ್ದಿ ಗೊತ್ತಾದಾಗ ಹೊರಗಿದ್ದ ಅನಾಸ್ಗೆ ಕರೆಮಾಡಿ ಮನೆಗೆ ಮರಳುವಂತೆ ಸೂಚಿಸಿದ್ದೆ. ನನ್ನ ಸ್ನೇಹಿತೆಯೋರ್ವಳು ಮಾರುಕಟ್ಟೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಮಾಹಿತಿ ತಿಳಿದಾಗ ಆಕೆಯನ್ನು ಹುಡುಕಲು ಹೋಗಿದ್ದೆ. ಮನೆಯ ಹೊರಗಿದ್ದ ಅನಾಸ್ ಕೂಡ ನನ್ನನ್ನು ಹಿಂಬಾಲಿಸಿದ್ದ. ಈ ನಡುವೆ ನನ್ನ ತಂದೆ ಮನೆಗೆ ಮರಳಿದ್ದರು.ಆದರೆ ಅನಾಸ್ ಇನ್ನೂ ಬಂದಿಲ್ಲ ಎನ್ನುವುದು ಗೊತ್ತಾದಾಗ ಆತನನ್ನು ಹುಡುಕಲು ತೆರಳಿದ್ದರು’ ಎಂದು ಹೇಳಿದ ಅಮಾನ್, ‘ನನ್ನ ತಂದೆ ಡೇರಿಯೊಂದರ ಬಳಿ ನಿಂತಿದ್ದಾಗ ಅವರ ಎದೆಗೆ ಗುಂಡು ಬಡಿದಿತ್ತು. ನೆರೆಯಾತ ಮಾಹಿತಿ ನೀಡಿದಾಗ ನಾನು ಧಾವಿಸಿದಾಗ ತಂದೆ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಇತರ ಇಬ್ಬರ ನೆರವಿನಿಂದ ಅವರನ್ನು ಸ್ಥಳೀಯ ಕ್ಲಿನಿಕ್ ಗೆ ಸಾಗಿಸಿದ್ದೆ. ನೋಡಿದರೆ ಅನಾಸ್ ಸೊಂಟದ ಕೆಳಗೆ ಗುಂಡೇಟಿನಿಂದ ಗಾಯಗೊಂಡು ಅದಾಗಲೇ ಅಲ್ಲಿದ್ದ. ಇಬ್ಬರನ್ನೂ ದೊಡ್ಡಾಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಆದರೆ ಅದಕ್ಕೆ ಯಾವುದೇ ವ್ಯವಸ್ಥೆ ಲಭ್ಯವಿರಲಿಲ್ಲ, ಕೆಲವೇ ಹೊತ್ತಿನಲ್ಲಿ ಅವರಿಬ್ಬರೂ ಅಸುನೀಗಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಶುಕ್ರವಾರ ರಾತ್ರಿ ಜಿಲ್ಲಾಡಳಿತದ ಉಪಸ್ಥಿತಿಯಲ್ಲಿ ದಫನವನ್ನು ಮಾಡಿದೆವು, ಅಂತ್ಯಸಂಸ್ಕಾರದ ವೇಳೆ ನಮ್ಮ ಕುಟುಂಬದ ಕೇವಲ ಐವರಿಗೆ ಹಾಜರಾಗಲು ಅವಕಾಶ ನೀಡಲಾಗಿತ್ತು’ ಎಂದರು.
ಫಾಹಿಂ ಕುರೇಶಿಯನ್ನು ಆತನ ನೆರೆಕರೆಯವರೇ ಕೊಂದಿದ್ದರು ಎಂದು ಹೇಳಿದ ಸೋದರ ಸಂಬಂಧಿ ಜಾವೇದ್, ‘ಮನೆಯಲ್ಲಿಯೇ ಇದ್ದ ಫಾಹಿಂ ಸಂಜೆ 7:30ರ ಸುಮಾರಿಗೆ ಯಾರೋ ತನ್ನ ವಾಹನಕ್ಕೆ ಬೆಂಕಿ ಹಚ್ಚುತ್ತಿದ್ದನ್ನು ಗಮನಿಸಿದ್ದ. ಹೊರಗೆ ತೆರಳಿದ ಆತ ದುಷ್ಕೃತ್ಯವನ್ನು ಆಕ್ಷೇಪಿಸಿದಾಗ ಅವರು ಆತನ ಎದೆಗೆ ಗುಂಡು ಹೊಡೆದು ಪರಾರಿಯಾಗಿದ್ದರು. ನಾವು ಫಾಹಿಂನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದೆವು, ಆದರೆ ಅದಾಗಲೇ ಆತ ಮೃತಪಟ್ಟಿದ್ದ’ ಎಂದರು.
ತನ್ನ ಮಗ ಆರಿಸ್ (18) ಕೂಡ ಹಿಂಸಾಚಾರಕ್ಕೆ ಬಲಿಯಾಗಿದ್ದಾನೆ ಎಂದು ಬೀದಿಬದಿ ವ್ಯಾಪಾರಿ ಗೌಹರ್ ಹೇಳಿದರು. ಕುಟುಂಬವು ಆರಿಸ್ನನ್ನು ಚಿಕಿತ್ಸೆಗಾಗಿ ಬರೇಲಿಯ ಆಸ್ಪತ್ರೆಗೆ ಕರೆದೊಯ್ದಿತ್ತು. ಹೀಗಾಗಿ ಆತನ ಹೆಸರು ಜಿಲ್ಲಾಡಳಿತದ ಪಟ್ಟಿಯಲ್ಲಿ ಸೇರಿಲ್ಲ ಎನ್ನಲಾಗಿದೆ.