ಪುಲ್ವಾಮಾ ದುರಂತದ ಕುರಿತು ನಾನು ಮೋದಿ ಸರಕಾರವನ್ನು ಪ್ರಶ್ನಿಸಿದ್ದರಿಂದ ನನ್ನ ವಿರುದ್ಧ ದಾಳಿ ನಡೆದಿದೆ: ಸತ್ಯಪಾಲ್ ಮಲಿಕ್‌

Update: 2024-02-23 11:20 GMT

ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ (Photo: PTI)

ಹೊಸದಿಲ್ಲಿ: ಹಲವಾರು ವಿಷಯಗಳಲ್ಲಿ ಪ್ರಧಾನಿ ಮೋದಿ ಆಡಳಿತದ ಕಟು ಟೀಕಾಕಾರರಾಗಿರುವ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರ ದಕ್ಷಿಣ ದಿಲ್ಲಿ ನಿವಾಸದ ಮೇಲೆ ಫೆ.22ರಂದು ಕೇಂದ್ರ ತನಿಖಾ ಏಜೆನ್ಸಿಯಿಂದ ದಾಳಿ ನಡೆದಿದೆ.

ಮಾಧ್ಯಮ ವರದಿಗಳ ಪ್ರಕಾರ, ಕಾಶ್ಮೀರದ ಚಿನಾಬ್ ನದಿಯ ಕೀರೂ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಸುಮಾರು 100 ಸಿಬಿಐ ಸಿಬ್ಬಂದಿಗಳು ಸೋಮವಿಹಾರದಲ್ಲಿಯ ಮಲಿಕ್ ನಿವಾಸ ಮತ್ತು ಇತರ 29 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

2021,ಅಕ್ಟೋಬರ್‌ನಲ್ಲಿ ಬಹುಕೋಟಿ ರೂ.ಗಳ ಈ ಯೋಜನೆಯಲ್ಲಿ ಭ್ರಷ್ಟಾಚಾರದ ಕುರಿತು ಮಾತನಾಡಿದ್ದ ಮಲಿಕ್, ತಾನು ಕೇಂದ್ರಾಡಳಿತ ಪ್ರದೇಶದ ರಾಜ್ಯಪಾಲನಾಗಿದ್ದಾಗ ಎರಡು ಕಡತಗಳಿಗೆ ಸಹಿ ಹಾಕಲು ತನಗೆ 300 ಕೋ.ರೂ.ಗಳ ಲಂಚದ ಆಮಿಷವನ್ನೊಡ್ಡಲಾಗಿತ್ತು ಮತ್ತು ಈ ಪೈಕಿ ಒಂದು ಕಡತವು ಈ ಯೋಜನೆಗೆ ಸಂಬಂಧಿಸಿತ್ತು ಎಂದು ಹೇಳಿದ್ದರು. ಮಲಿಕ್ 2018,ಆ.23ರಿಂದ 2019,ಅ.30ರವರೆಗೆ ಆ ಹುದ್ದೆಯಲ್ಲಿದ್ದರು.

ಗುರುವಾರದ ದಾಳಿಯ ಬಳಿಕ ಮಲಿಕ್, ಎಕ್ಸ್ ಪೋಸ್ಟ್‌ನಲ್ಲಿ ಮೋದಿಯವರನ್ನು ಸರ್ವಾಧಿಕಾರಿ ಎಂದು ಬಣ್ಣಿಸಿದ್ದರು. ಸರ್ವಾಧಿಕಾರಿ ಸರಕಾರಿ ಏಜೆನ್ಸಿಗಳ ದುರ್ಬಳಕೆ ಮಾಡಿಕೊಂಡು ತನ್ನನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ತಾನು ರೈತನ ಮಗನಾಗಿದ್ದು ಹೆದರುವುದೂ ಇಲ್ಲ,ಶರಣಾಗುವುದೂ ಇಲ್ಲ ಎಂದು ಹೇಳಿದ್ದರು.

ಗುರುವಾರ ತನ್ನ ನಿವಾಸದ ಮೇಲೆ ಸಿಬಿಐ ದಾಳಿ ನಡೆದಾಗ ಮಲಿಕ್ ತೀವ್ರ ಎದೆ ಸೋಂಕಿನಿಂದಾಗಿ ದಿಲ್ಲಿಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಶುಕ್ರವಾರ ಆಸ್ಪತ್ರೆಯ ಹಾಸಿಗೆಯಿಂದಲೇ thewire.in ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಮಲಿಕ್, ‘ನಾನು ರೈತರ ಹೋರಾಟವನ್ನು ಬೆಂಬಲಿಸುತ್ತೇನೆ, ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದೇನೆ ಮತ್ತು ಹಲವಾರು ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಬಲಿ ತೆಗೆದುಕೊಂಡಿದ್ದ 2019ರ ಪುಲ್ವಾಮಾ ದುರಂತಕ್ಕೆ ಕಾರಣವಾಗಿದ್ದ ತಪ್ಪು ನಿರ್ವಹಣೆಯ ಬಗ್ಗೆ ಮಾತನಾಡಿದ್ದೆ. ಇದೇ ಕಾರಣದಿಂದ ನನ್ನ ಮೇಲೆ ದಾಳಿ ನಡೆದಿದೆ’ ಎಂದು ಹೇಳಿದರು.

‘ನನ್ನ ಮೇಲೆ ಏಕೆ ದಾಳಿ ನಡೆದಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲನಾಗಿದ್ದೇನೆ. ನನ್ನ ವಿರುದ್ಧ ಯಾವುದೇ ಎಫ್‌ಐಆರ್ ಇಲ್ಲ. ಬಹುಕೋಟಿ ರೂ.ಯೋಜನೆಯ ಕಡತಕ್ಕೆ ಸಹಿ ಹಾಕುವಂತೆ ನನಗೆ ಲಂಚ ನೀಡಲು ಪ್ರಯತ್ನಿಸಿದ್ದವರನ್ನು ತನಿಖೆ ನಡೆಸುವ ಬದಲು ಸಿಬಿಐ ದೂರುದಾರನ ಮೇಲೆಯೇ ದಾಳಿ ನಡೆಸಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ ನನ್ನ ಮೇಲೆ ದಾಳಿ ನಡೆದಿದೆ’ಎಂದು ಹೇಳಿದ ಮಲಿಕ್, ‘ಪುಲ್ವಾಮಾ ದುರಂತದ ಬಗ್ಗೆ ನಾನು ಮೋದಿ ಸರಕಾರವನ್ನು ಪ್ರಶ್ನಿಸಿದ್ದಕ್ಕಾಗಿಯೂ ಈ ದಾಳಿ ನಡೆದಿದೆ. ಆ ಬಗ್ಗೆ ಮೌನವಾಗಿರುವಂತೆ ಪ್ರಧಾನಿ ಮೋದಿ ನನಗೆ ಸೂಚಿಸಿದ್ದರು. ನಾನು ಸಾರ್ವಜನಿಕವಾಗಿ ಹೇಳಿದ್ದು ಅಧಿಕಾರದಲ್ಲಿದ್ದವರಿಗೆ ಸಿಟ್ಟನ್ನುಂಟು ಮಾಡಿತ್ತು’ ಎಂದರು.

ಸಿಆರ್‌ಪಿಎಫ್ ತನ್ನ ಸಿಬ್ಬಂದಿಗಳನ್ನು ಸಾಗಿಸಲು ವಿಮಾನವನ್ನು ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಕೋರಿತ್ತು ಮತ್ತು ಗೃಹಸಚಿವ ಅಮಿತ್ ಶಾ ಅವರು ಈ ಕೋರಿಕೆಯನ್ನು ನಿರಾಕರಿಸಿದ್ದರು. ಇದರ ಬೆನ್ನಿಗೇ ಫುಲ್ವಾಮಾ ಭಯೋತ್ಪಾದಕ ದಾಳಿ ನಡೆದಿತ್ತು. ದಾಳಿ ನಡೆದ ದಿನ (2019,ಫೆ.14) ಸಂಜೆ ‘ಇದು ನಮ್ಮದೇ ತಪ್ಪಾಗಿದೆ.ನಾವು ವಿಮಾನವನ್ನು ನೀಡಿದ್ದರೆ ಈ ದಾಳಿ ನಡೆಯುತ್ತಿರಲಿಲ್ಲ’ ಎಂದು ತಾನು ಮೋದಿಯವರಿಗೆ ಹೇಳಿದ್ದೆ. ಬಾಯಿ ಮುಚ್ಚಿಕೊಂಡಿರುವಂತೆ ಅವರು ತನಗೆ ಸೂಚಿಸಿದ್ದರು ಎಂದು ಮಲಿಕ್ 2023 ಎಪ್ರಿಲ್‌ನಲ್ಲಿ ಸುದ್ದಿಸಂಸ್ಥೆಗೆ ನೀಡಿದ್ದ ಸ್ಫೋಟಕ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದರು.

ನೇರ ಮಾತಿನ ಮಲಿಕ್ ಫುಲ್ವಾಮಾ ದುರಂತದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಡಿ ತನಿಖೆಗೂ ಕರೆ ನೀಡಿದ್ದರು.

ದಿಲ್ಲಿ ಚಲೋ ಆಂದೋಲನವನ್ನು ನಡೆಸುತ್ತಿರುವ ರೈತರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ದಿಲ್ಲಿ-ಹರ್ಯಾಣ ಮತ್ತು ದಿಲ್ಲಿ-ಉತ್ತರ ಪ್ರದೇಶ ಗಡಿಗಳಲ್ಲಿ ಏರ್ಪಡಿಸಲಾಗಿರುವ ಭಾರೀ ಪೋಲಿಸ್ ಬಂದೋಬಸ್ತ್ ಕುರಿತಂತೆ ಮಲಿಕ್,‘ಇವು ಭಾರತ-ಚೀನಾ ಮತ್ತು ಭಾರತ-ಪಾಕಿಸ್ತಾನ ಗಡಿಗಳು ಎಂಬಂತೆ ಬಂದೋಬಸ್ತ್‌ನ್ನು ಏರ್ಪಡಿಸಲಾಗಿದೆ. 2019ರಲ್ಲಿ ಪುಲ್ವಾಮಾದಲ್ಲಿ ಇಂತಹುದೇ ಎಚ್ಚರಿಕೆಯನ್ನು ವಹಿಸಿದ್ದರೆ ನಾವು ಅಷ್ಟೊಂದು ಯೋಧರನ್ನು ಕಳೆದುಕೊಳ್ಳುತ್ತಿರಲಿಲ್ಲ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News