ನಿಮ್ಮ ಖರ್ಚುಗಳನ್ನು ನಿಮ್ಮ ಬಜೆಟ್ ಗೆ ನಿಭಾಯಿಸಲಾಗದಿದ್ದರೆ ನನ್ನನ್ನು ದೂಷಿಸಬೇಡಿ: ಕರ್ನಾಟಕಕ್ಕೆ ಅನುದಾನ ವಂಚಿಸಲಾಗಿದೆ ಎಂಬ ಆರೋಪ ಕುರಿತು ವಿತ್ತ ಸಚಿವೆ ಕಿಡಿ

Update: 2024-02-05 12:00 GMT

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Photo: PTI)

ಹೊಸದಿಲ್ಲಿ: ಕರ್ನಾಟಕದ ಪಾಲಿನ ನಿಧಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸುತ್ತಿಲ್ಲ ಎಂಬ ಕಾಂಗ್ರೆಸ್‌ ಪಕ್ಷದ ಆರೋಪವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ನಿರಾಕರಿಸಿದ್ದಾರೆ. ಕೆಲ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ತಾರತಮ್ಯಕಾರಿ ನಿಲುವು ಹೊಂದಿದೆ ಎಂಬುದು ರಾಜಕೀಯ ಉದ್ದೇಶದ ಆರೋಪವಾಗಿದೆ ಎಂದು ಅವರು ಹೇಳಿದ್ದಾರೆ.

ಇಂದು ಲೋಕಸಭೆಯಲ್ಲಿ ಪ್ರಶ್ನಾವೇಳೆಯಲ್ಲಿ ವಿಪಕ್ಷ ನಾಯಕ ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧುರಿ ಹಾಗೂ ನಿರ್ಮಲಾ ಸೀತಾರಾಮನ್‌ ನಡುವೆ ಈ ವಿಚಾರದಲ್ಲಿ ವಾಕ್ಸಮರವೇ ನಡೆದು ಹೋಯಿತು.

“ಕರ್ನಾಟಕಕ್ಕೆ ಸಲ್ಲಬೇಕಾದ ಅನುದಾನಗಳಿಂದ ಅದನ್ನು ವಂಚಿತಗೊಳಿಸಲಾಗಿದೆಯೇ ಎಂದು ತಿಳಿಯಬೇಕಿದೆ. ಏಕೆಂದರೆ, ಕೆಲ ತಿಂಗಳುಗಳ ಹಿಂದೆ ಈ ಸ್ಥಿತಿ ಇರಲಿಲ್ಲ. ಆದರೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಸ್ಯೆ ಆರಂಭಗೊಂಡಿದೆ. ಇದರ ಹಿಂದಿನ ಕಾರಣವೇನು?” ಎಂದು ಚೌಧರಿ ಪ್ರಶ್ನಿಸಿದರು.

ಆರೋಪವನ್ನು ಖಡಾಖಂಡಿತವಾಗಿ ಅಲ್ಲಗಳೆದ ನಿರ್ಮಲಾ ಸೀತಾರಾಮನ್, “ನೀವು ದಿಢೀರನೇ ಖರ್ಚು ಮಾಡುತ್ತಾ ಇದ್ದರೆ, ರಾಜ್ಯ ಬಜೆಟ್‌ಗೆ ಅದನ್ನು ತಾಳಲಾಗದು, ನನ್ನನ್ನು ದೂಷಿಸಬೇಡಿ,” ಎಂದು ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳ ವಿರುದ್ಧ ಸಚಿವೆ ಪರೋಕ್ಷವಾಗಿ ಕಿಡಿಕಾರಿದರು.

“ಹಣಕಾಸು ಆಯೋಗದ ಶಿಫಾರಸುಗಳ ಕುರಿತಂತೆ ಯಾವುದೇ ವಿತ್ತ ಸಚಿವರು ಹಸ್ತಕ್ಷೇಪ ನಡೆಸುವ ಸಾಧ್ಯತೆಯಿಲ್ಲ. ನನಗೆ ಈ ರಾಜ್ಯ ಇಷ್ಟವಿಲ್ಲ, ಪಾವತಿ ನಿಲ್ಲಿಸಿ ಎಂದು ಹೇಳುವ ಹಾಗಿಲ್ಲ. ಆ ರೀತಿ ಆಗದು,” ಎಂದು ಸಚಿವೆ ಹೇಳಿದರು.

ಸಚಿವೆಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಸಿಎಂ ಸಿದ್ದರಾಮಯ್ಯ, “ಹಣಕಾಸು ಬಿಡುಗಡೆ ಹಾಗೂ ಪಂಚ ಗ್ಯಾರಂಟಿಗಳ ನಡುವೆ ಯಾವುದೇ ನಂಟು ಇಲ್ಲ. ಕೇಂದ್ರ ಸಚಿವೆಗೆ ಮಧ್ಯಂತರ ವರದಿ ಸಲ್ಲಿಕೆಯಾದಾಗ ಯಾವುದೇ ಗ್ಯಾರಂಟಿಗಳು ಜಾರಿಯಾಗಿರಲಿಲ್ಲ. ವಿತ್ತ ಆಯೋಗ ಶಿಫಾರಸು ಮಾಡಿದ್ದ ರೂ 11,000 ಕೋಟಿ ವಿಶೇಷ ಅನುದಾನವನ್ನು ಯಾರು ತಿರಸ್ಕರಿಸಿದ್ದರು? ಹಿಂದಿನ ಬಜೆಟಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಆಶ್ವಾಸನೆ ನೀಡಲಾಗಿತ್ತು. ಅದೆಲ್ಲಿದೆ?” ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News