ಅಕ್ರಮ ಮದ್ರಸಾವನ್ನು ನೆಲಸಮ ; ಹಲ್ದ್ವಾನಿಯಲ್ಲಿ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ
ಹಲ್ದ್ವಾನಿ : ಉತ್ತರಾಖಂಡದಲ್ಲಿನ ಅಕ್ರಮ ಮದ್ರಸಾವನ್ನು ಅಧಿಕಾರಿಗಳು ನೆಲಸಮಗೊಳಿಸಿದ ನಂತರ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಪೊಲೀಸರ ಕಾರು ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಸ್ಥಳದಲ್ಲಿ ಘರ್ಷಣೆ ಸ್ಫೋಟಗೊಂಡಿದೆ ಎಂದು indiatoday.in ವರದಿ ಮಾಡಿದೆ.
ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿರುವುದರಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರೆಸಲಾಗಿದ್ದು, ಮುಖ್ಯಮಂತ್ರಿ ಪುಷ್ಕರ್ ಧಾಮಿ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.
ಬಂಭುಲ್ಪುರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದೆ ಎಂದು ನಂಬಲಾಗಿರುವ ಮದ್ರಸಾವನ್ನು ಹಲ್ದ್ವಾನಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಇಂದು ನೆಲಸಮಗೊಳಿಸಿದ್ದಾರೆ.
ಈ ಕ್ರಮಕ್ಕೆ ಪ್ರತೀಕಾರವಾಗಿ ಘರ್ಷಣೆಗಿಳಿದಿರುವ ಜನರ ಗುಂಪೊಂದು ಸ್ಥಳದಲ್ಲಿ ಕಲ್ಲು ತೂರಾಟ ನಡೆಸಿ, ಹಲವಾರು ಅಧಿಕಾರಿಗಳು ಗಾಯಗೊಳ್ಳುವಂತೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘರ್ಷಣೆಯ ಸಂದರ್ಭದಲ್ಲಿ ಹಲವಾರು ವಾಹನಗಳನ್ನೂ ಧ್ವಂಸಗೊಳಿಸಲಾಗಿದ್ದು, ಪೊಲೀಸರ ವಾಹನ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದರೊಂದಿಗೆ ವಿದ್ಯುತ್ ಪರಿವರ್ತಕಕ್ಕೂ ಬೆಂಕಿ ಹಚ್ಚಲಾಗಿದ್ದು, ಇದರಿಂದಾಗಿ ಸಂಘರ್ಷಪೀಡಿತ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿದೆ. ಗುಂಪೊಂದು ಬಂಭುಲ್ಪುರ ಪೊಲೀಸ್ ಠಾಣೆಯನ್ನು ಸುತ್ತುವರಿದಿದ್ದರಿಂದ ಹಲವಾರು ಪತ್ರಕರ್ತರು ಹಾಗೂ ಆಡಳಿತಾತ್ಮಕ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಸೆರೆಯಾಗಿದ್ದರು ಎಂದು ವರದಿಯಾಗಿದೆ.