ಅಪರೂಪದ ಕ್ರಮದಲ್ಲಿ ಸೇನಾ ಮುಖ್ಯಸ್ಥ ಜ.ಪಾಂಡೆ ಅಧಿಕಾರಾವಧಿ ಒಂದು ತಿಂಗಳು ವಿಸ್ತರಿಸಿದ ಸರಕಾರ
ಹೊಸದಿಲ್ಲಿ: ಅಸಾಮಾನ್ಯ ಕ್ರಮವೊಂದರಲ್ಲಿ ಭಾರತ ಸರಕಾರವು ಮೇ 31ರಂದು ನಿವೃತ್ತರಾಗಲಿದ್ದ ಸೇನಾ ಮುಖ್ಯಸ್ಥ ಜ.ಮನೋಜ ಪಾಂಡೆಯವರ ಅಧಿಕಾರಾವಧಿಯನ್ನು ರವಿವಾರ ಒಂದು ತಿಂಗಳು ವಿಸ್ತರಿಸಿದೆ.
ಪಾಂಡೆಯವರು 2022,ಎ.30ರಂದು ಸೇನಾ ಮುಖ್ಯಸ್ಥ (ಸಿಒಎಎಸ್)ರಾಗಿ ನೇಮಕಗೊಂಡಿದ್ದರು. ಸೇನಾ ಮುಖ್ಯಸ್ಥರು ಮೂರು ವರ್ಷಗಳು ಅಥವಾ 62 ವರ್ಷ ವಯಸ್ಸಿನವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೆ. ಪಾಂಡೆಯವರಿಗೆ ಮೇ 6ರಂದು 62 ವರ್ಷಗಳಾಗಿದ್ದು,ಇದೇ ತಿಂಗಳ ಅಂತ್ಯದಲ್ಲಿ ಅವರು ನಿವೃತ್ತರಾಗಬೇಕಿತ್ತು.
ಇದೊಂದು ಅಪರೂಪದ ಕ್ರಮವಾಗಿದ್ದು,ಜೂ.4ರಂದು ಅಧಿಕಾರಕ್ಕೆ ಬರಲಿರುವ ಸರಕಾರವು ಮುಂದಿನ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಲಿದೆ.
ಸೇನಾ ನಿಯಮಗಳಂತೆ ಸೇವೆಯಲ್ಲಿರುವ ಸಿಒಎಎಸ್ ನಿವೃತ್ತರಾದಾಗ ಅತ್ಯಂತ ಹಿರಿಯ ಸೇನಾ ಕಮಾಂಡರ್ ಅಥವಾ ಸೇನಾ ಉಪ ಮುಖ್ಯಸ್ಥರನ್ನು ಆ ಹುದ್ದೆಗೆ ನೇಮಕಗೊಳಿಸಲಾಗುತ್ತದೆ,ಆದರೆ ಸೇನಾ ಮುಖ್ಯಸ್ಥರ ನೇಮಕಾತಿಯು ಸರಕಾರದ ವಿಚೇಚನೆಯಲ್ಲಿರುತ್ತದೆ.
ಜ.ಪಾಂಡೆಯವರ ಅಧಿಕಾರಾವಧಿಯನ್ನು ವಿಸ್ತರಿಸುವ ನಿರ್ಧಾರವನ್ನು ಟೀಕಿಸಿರುವ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿಯವರು, ‘ನರೇಂದ್ರ ಮೋದಿ ಸರಕಾರಕ್ಕೆ ತನ್ನ ಅಧಿಕಾರ ಅಂತ್ಯಗೊಳ್ಳುವ ದಿನಾಂಕ ಗೊತ್ತಿತ್ತು ಮತ್ತು ಬಹು ಹಿಂದೆಯೇ ನೂತನ ಸೇನಾ ಮುಖ್ಯಸ್ಥರನ್ನು ಪ್ರಕಟಿಸಬೇಕಿತ್ತು. ಆಡಳಿತಾರೂಢ ಪಕ್ಷದ ರಾಜಕೀಯದಿಂದ ನಮ್ಮ ಸಶಸ್ತ್ರ ಪಡೆಗಳನ್ನು ಹೊರಗಿರಿಸಬೇಕು,ಆದರೆ ಕಳೆದೊಂದು ದಶಕದಲ್ಲಿ ಮೋದಿ ಸರಕಾರವು ತನ್ನ ಚುನಾವಣಾ ಲಾಭಕ್ಕಾಗಿ ಯೋಧರ ಬಳಕೆ ಮತ್ತು ದುರ್ಬಳಕೆಯನ್ನು ಮಾಡಿಕೊಂಡಿದ್ದನ್ನು ನಾವು ನೋಡಿದ್ದೇವೆ. ನಮ್ಮ ಯೋಧರಿಗೆ ನಿಯಂತ್ರಣ ರೇಖೆಯಲ್ಲಿ ಗಸ್ತು ನಿರ್ವಹಿಸಲು ಸಾಧ್ಯವಿಲ್ಲದ್ದಾಗ ನಾವಿದನ್ನು ಚೀನಾ ಗಡಿಯಲ್ಲಿ ಕಂಡಿದ್ದೇವೆ. ಜ.ಪಾಂಡೆಯವರ ಕುರಿತು ಇತ್ತೀಚಿನ ನಿರ್ಧಾರವು ಪ್ರಧಾನಿ ಮೋದಿ,ರಕ್ಷಣಾ ಸಚಿವರು ಮತ್ತು ಭಾರತದ ರಾಷ್ಟ್ರೀಯ ಭದ್ರತೆ ಕುರಿತು ನಿರ್ಧಾರವನ್ನು ಕೈಗೊಳ್ಳುವಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳ ಕಳಪೆ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತಿದೆ’ ಎಂದು ಹೇಳಿದ್ದಾರೆ.
ಜ.ಪಾಂಡೆಯವರಿಗೆ ಕೇವಲ ಒಂದು ತಿಂಗಳ ಸೇವಾ ವಿಸ್ತರಣೆ ನೀಡಲಾಗಿದೆ, ಅಂದರೆ ಇದು ತಾತ್ಕಾಲಿಕ ಕ್ರಮವಾಗಿದ್ದು ಮೂಲಭೂತವಾಗಿ ಈ ಸರಕಾರದಲ್ಲಿ ಆಡಳಿತದ ಸಂಪೂರ್ಣ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದು ಅಸಮರ್ಥತೆ ಅಲ್ಲದಿದ್ದರೆ ಹೆಚ್ಚು ಕೆಟ್ಟದಾದ ಏನೋ ಪಿತೂರಿಯಾಗಿರಬೇಕು ಎಂದೂ ಉವೈಸಿ ಹೇಳಿದ್ದಾರೆ.