ಇಸ್ರೇಲ್ ಅತಿಕ್ರಮಣ ನಿಲ್ಲಿಸುವಂತೆ ಆಗ್ರಹಿಸುವ ನಿರ್ಣಯದ ಮತದಾನದಿಂದ ಹೊರಗುಳಿದ ಭಾರತ

Update: 2024-09-19 03:33 GMT

PC: x.com/AkkadinNevsehir

ಹೊಸದಿಲ್ಲಿ: ಫೆಲಸ್ತೀನ್ ಭೂಭಾಗದ ಮೇಲೆ ಇಸ್ರೇಲ್ ನಡೆಸಿರುವ ಅತಿಕ್ರಮಣವನ್ನು ಯಾವುದೇ ವಿಳಂಬವಿಲ್ಲದೇ 12 ತಿಂಗಳ ಒಳಗಾಗಿ ಸ್ಥಗಿತಗೊಳಿಸಬೇಕು ಮತ್ತು ಕಾನೂನುಬಾಹಿರ ಅಸ್ತಿತ್ವವನ್ನು ಕೊನೆಗೊಳಿಸಬೇಕು ಎಂಬ ಆಗ್ರಹಪೂರ್ವಕ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯಸಭೆ ಆಂಗೀಕರಿಸಿದ್ದು, ಈ ಕುರಿತ ಮತದಾನದಿಂದ ಭಾರತ ಹೊರಗುಳಿದಿದೆ.

193 ಸದಸ್ಯಬಲದ ಸಾಮಾನ್ಯಸಭೆಯಲ್ಲಿ ಈ ನಿರ್ಣಯದ ಪರ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, 124 ದೇಶಗಳು ನಿರ್ಣಯದ ಪರವಾಗಿ ಮತ್ತು 14 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು. ಭಾರತ ಸೇರಿದಂತೆ 43 ದೇಶಗಳು ಮತದಾನದಿಂದ ಹೊರಗುಳಿದವು.

ಆಕ್ರಮಿತ ಪೂರ್ವ ಜೆರುಸಲೇಂ ಮತ್ತು ಉಳಿದ ಅತಿಕ್ರಮಿತ ಪ್ಯಾಲೆಸ್ತೀನಿ ಭೂಭಾಗವನ್ನು ಪರಿಗಣಿಸಿ, ಈ ಮತದಾನ 10ನೇ ತುರ್ತು ವಿಶೇಷ ಅಧಿವೇಶನದ ನಡುವೆ ನಡೆಯಿತು. ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಇಟೆಲಿ, ನೇಪಾಳ, ಉಕ್ರೇನ್ ಹಾಗೂ ಬ್ರಿಟನ್ ಸೇರಿದಂತೆ 43 ದೇಶಗಳು ಹೊರಗುಳಿದವು. ಎರಡು ದೇಶಗಳ ಪರಿಹಾರವನ್ನು ಬೆಂಬಲಿಸಿದ ಹೊರತಾಗಿಯೂ ಬ್ರಿಟನ್ ಈ ನಿರ್ಣಯದ ಮೇಲಿನ ಮತದಾನದಿಂದ ಹೊರಗುಳಿದಿದೆ. ಜಪಾನ್ ನಿರ್ಣಯದ ಪರವಾಗಿ ಮತ ಚಲಾಯಿಸಿದ್ದು, ಅಂತರಾಷ್ಟ್ರೀಯ ನ್ಯಾಯಾಲಯ ಮತ್ತು ಅದರ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡುವುದಾಗಿ ಸ್ಪಷ್ಟಪಡಿಸಿದೆ. ಇಸ್ರೇಲ್ ಚಟುವಟಿಕೆಗಳು ಎರಡು ದೇಶಗಳ ಪರಿಹಾರ ಮುಂದುವರಿಯಲು ಪ್ರತೀಕೂಲವಾಗಿದೆ ಎಂದು ಅಂತರಾಷ್ಟ್ರೀಯ ನ್ಯಾಯಾಲಯ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News