ಭಾರತ-ಕೆನಡಾ ಬಿಕ್ಕಟ್ಟು: ಆತಂಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಪೋಷಕರು
ಹೊಸದಿಲ್ಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಕೆನಡಾದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಭದ್ರತೆ ಹಾಗೂ ಸುರಕ್ಷತೆ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಮಕ್ಕಳು ತಮ್ಮ ರಾಷ್ಟ್ರೀಯತೆಯ ಆಧಾರದ ಮೇಲೆ ತಾರತಮ್ಯ ಅಥವಾ ಪಕ್ಷಪಾತವನ್ನು ಅನುಭವಿಸಬಹುದು ಎಂದು ಪೋಷಕರು ಭಯಗೊಂಡಿದ್ದಾರೆ.
"ನಾವು ಚಿಂತಿತರಾಗಿದ್ದೇವೆ, ನನ್ನ ಮಗಳು ಏಳು ತಿಂಗಳ ಹಿಂದೆ ಓದಲು ಕೆನಡಾಕ್ಕೆ ಹೋಗಿದ್ದಳು. ನನ್ನ ಮಗಳೂ ಅಲ್ಲಿ ಆತಂಕದಿಂದ ಇದ್ದಾಳೆ, ಅವಳಿಗೆ ತನ್ನ ಅಧ್ಯಯನದತ್ತ ಗಮನ ಹರಿಸಲು ಸಾಧ್ಯವಿಲ್ಲ" ಎಂದು ಬಲ್ವಿಂದರ್ ಸಿಂಗ್ ಎಂಬವರು ಹೇಳಿಕೊಂಡಿದ್ದಾರೆ.
"ನನ್ನ ಇಬ್ಬರು ಹೆಣ್ಣುಮಕ್ಕಳು ಕೆನಡಾದಲ್ಲಿದ್ದಾರೆ. ನಾನು ಹೆಚ್ಚು ಆತಂಕಗೊಂಡಿದ್ದೇನೆ, ಎರಡೂ ದೇಶಗಳ ಸರ್ಕಾರಗಳು ಪರಿಹಾರವನ್ನು ಕಂಡುಕೊಳ್ಳಬೇಕು," ಮತ್ತೋರ್ವ ಪೋಷಕ ಕುಲ್ದೀಪ್ ಕೌರ್ ಹೇಳಿದ್ದಾರೆ.
ಉಭಯ ದೇಶಗಳ ನಡುವಿನ ವೈಮನಸ್ಸು ಹೆಚ್ಚುತ್ತಿರುವಂತೆಯೇ ಕೆನಡಾದಲ್ಲಿ ಅಧ್ಯಯನ ಮಾಡುವ ಕೆಲವು ವಿದ್ಯಾರ್ಥಿಗಳು ತಮ್ಮ ಯೋಜನೆಯ ಬಗ್ಗೆ ಆತಂಕಗೊಂಡಿದ್ದಾರೆ. ಕೆನಡಾದಲ್ಲಿ ವೀಸಾ ಸೇವೆಗಳನ್ನು ಅಮಾನತುಗೊಳಿಸುವ ಸರ್ಕಾರದ ಕ್ರಮವು ತಮ್ಮ ವಲಸೆಯ ಮೇಲೆ ನೇರ ಪರಿಣಾಮ ಬೀರಬಹುದು ಎಂದು ಅವರು ಭಯ ಬಿದ್ದಿದ್ದಾರೆ.
ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ನಿವಾಸಿಗಳಿಗೆ ಸಹಾಯವಾಣಿಯನ್ನು ಸ್ಥಾಪಿಸುವಂತೆ ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನಿಲ್ ಜಾಖರ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಒತ್ತಾಯಿಸಿದ್ದಾರೆ.
"ನಮ್ಮ ಎನ್‌ಆರ್‌ಐಗಳು ಮತ್ತು ವಿದ್ಯಾರ್ಥಿಗಳು ಭಾರತೀಯ ಕಾನ್ಸುಲೇಟ್‌ಗಳನ್ನು ಸಂಪರ್ಕಿಸಲು ಮತ್ತು ಸಹಾಯವನ್ನು ಪಡೆಯಲು ಮೀಸಲಾದ ಸಹಾಯವಾಣಿ ಸಂಖ್ಯೆಯನ್ನು ಸ್ಥಾಪಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ" ಎಂದು ಸುನಿಲ್ ಜಾಖರ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಕೆನಡಾದಲ್ಲಿರುವ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಒತ್ತಾಯಿಸಿದ್ದಾರೆ.