ಮಾಲ್ದೀವ್ಸ್ ಅಧ್ಯಕ್ಷ ಮುಯಿಝ್ಝು ಪದಚ್ಯುತಗೊಳಿಸುವ ಸಂಚಿಗೆ ಭಾರತದ ಸಹಕಾರ ಕೋರಿದ್ದ ವಿಪಕ್ಷಗಳು: ವಾಷಿಂಗ್ಟನ್ ಪೋಸ್ಟ್ ವರದಿ

Update: 2025-01-01 09:34 GMT

ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಜೊತೆ ಪ್ರಧಾನಿ ಮೋದಿ (Photo credit: presidency.gov.mv)

ಹೊಸದಿಲ್ಲಿ: ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಅವರನ್ನು ಪದಚ್ಯುತಗೊಳಿಸುವ ಸಂಚು ರೂಪಿಸಲು ಅಲ್ಲಿನ ವಿಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕರು ಭಾರತದಿಂದ 6 ಮಿಲಿಯನ್ ಡಾಲರ್ ಅಥವಾ ಸುಮಾರು 51.37 ಕೋಟಿ ರೂ. ಹಣದ ಬೃಹತ್ ಮೊತ್ತದ ಸಹಾಯವನ್ನು ಕೇಳಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಮುಯಿಝ್ಝು ಅವರನ್ನು ಪದಚ್ಯುತಗೊಳಿಸುವ ಭಾಗವಾಗಿರುವ "ಡೆಮಾಕ್ರಟಿಕ್ ರಿನ್ಯೂವಲ್ ಇನಿಶಿಯೇಟಿವ್" ಎಂಬ ಶೀರ್ಷಿಕೆಯಲ್ಲಿರುವ ಆಂತರಿಕ ದಾಖಲೆಯ ಪ್ರತಿ ವಾಷಿಂಗ್ಟನ್ ಪೋಸ್ಟ್ ಗೆ ಲಭ್ಯವಾಗಿದೆ.

ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಮಾಲ್ದೀವ್ಸ್ ನ ವಿರೋಧ ಪಕ್ಷದ ನಾಯಕರು ಅಧ್ಯಕ್ಷರನ್ನು ಪದಚ್ಯುತಗೊಳಿಸುವ ಭಾಗವಾಗಿ ದೋಷಾರೋಪಣೆ ಮಾಡಲು ಮತಕ್ಕೆ ಹಾಕಲು ಮುಯುಝ್ಝು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಸೇರಿದಂತೆ 40 ಸಂಸದರಿಗೆ ಲಂಚ ನೀಡುವ ಯೋಜನೆ ಹಾಕಿಕೊಂಡಿದ್ದರು. ಅಲ್ಲದೇ ಅವರು ಮಾಲ್ದೀವ್ಸ್ ಸೇನೆಯ 10 ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಮೂರು "ಪ್ರಬಲ ಕ್ರಿಮಿನಲ್ ಗ್ಯಾಂಗ್" ಗಳಿಗೆ ಹಣ ಪಾವತಿಸುವ ಯೋಜನೆ ಹೊಂದಿದ್ದರು.

ತಮ್ಮ ಸಂಚನ್ನು ಕಾರ್ಯರೂಪಕ್ಕೆ ತರಲು ವಿವಿಧ ಪಕ್ಷಗಳಿಗೆ ಹಣ ಪಾವತಿಸುವ ಸಲುವಾಗಿ, ವಿಪಕ್ಷಗಳು ಭಾರತ ಸರಕಾರದಿಂದ 87 ಮಿಲಿಯನ್ ಮಾಲ್ದೀವ್ ರುಫಿಯಾ ಅಥವಾ 6 ಮಿಲಿಯನ್ ಡಾಲರ್ ಹಣವನ್ನು ಕೇಳಿದ್ದರು ಎಂದು ಇಬ್ಬರು ಮಾಲ್ದೀವ್ಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಆದರೆ ಭಾರತವು ಮುಯಿಝ್ಝು ಪದಚ್ಯುತಗೊಳಿಸುವ ಪ್ರಯತ್ನಕ್ಕೆ ಹಣಕಾಸು ಒದಗಿಸದಿದ್ದರಿಂದ ಅದರ ಸಂಚು ಕಾರ್ಯರೂಪಕ್ಕೆ ಬರಲಿಲ್ಲ ಎನ್ನಲಾಗಿದೆ.

ಮಾಲ್ಡೀವ್ಸ್ನಲ್ಲಿದ್ದ ತನ್ನ ಎಲ್ಲಾ ಸೇನಾ ಸಿಬ್ಬಂದಿಯನ್ನು ಭಾರತ ವಾಪಾಸ್ ಕರೆಸಿಕೊಂಡ ತಿಂಗಳುಗಳ ನಂತರ ಈ ಬೆಳವಣಿಗೆ ನಡೆದಿದೆ. ಚೀನಾ ಪರ ನಿಲುವು ಹೊಂದಿದ್ದ ಮುಯಿಝ್ಝು ಭಾರತೀಯ ಸೇನೆಯನ್ನು ತನ್ನ ದೇಶದಿಂದ ವಾಪಾಸ್ ಕಳುಹಿಸುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಿದ್ದರು.

ನವೆಂಬರ್ 18, 2023 ರಂದು ಅಧಿಕಾರಕ್ಕೆ ಬಂದ ಒಂದು ದಿನದ ನಂತರ, ಮುಯಿಝ್ಝು ಮಾಲೆಯಲ್ಲಿ ಅಂದಿನ ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾದಾಗ ಮಾಲ್ಡೀವ್ಸ್ನಿಂದ ತನ್ನ ಮಿಲಿಟರಿಯನ್ನು ವಾಪಾಸ್ ಕರೆಸಿಕೊಳ್ಳುವಂತೆ ಭಾರತವನ್ನು ಕೇಳಿದ್ದರು.

ಮಾಲ್ದೀವ್ಸ್ ನಲ್ಲಿ ಸೇನಾ ಪಡೆಯ ಉಪಸ್ಥಿತಿಯನ್ನು ಹೊಂದಿದ್ದ ಏಕೈಕ ದೇಶ ಭಾರತವಾಗಿತ್ತು. ಭಾರತೀಯ ಸೇನಾಪಡೆಯು ದ್ವೀಪಸಮೂಹವಾದ ಮಾಲ್ದೀವ್ಸ್ ನಲ್ಲಿ ರಾಡಾರ್ ಕೇಂದ್ರಗಳು ಮತ್ತು ಕಣ್ಗಾವಲು ವಿಮಾನಗಳನ್ನು ನಿರ್ವಹಿಸುತ್ತಿತ್ತು. ಭಾರತೀಯ ಯುದ್ಧನೌಕೆಗಳು ಮಾಲ್ಡೀವ್ಸ್ನ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗಲು ಸಹಾಯ ಮಾಡುತ್ತಿತ್ತು.

2024ರ ಜನವರಿಯಲ್ಲಿ, ಮುಯಿಝ್ಝು ಭಾರತದೊಂದಿಗಿನ ರಾಜತಾಂತ್ರಿಕ ಜಗಳದ ನಡುವೆ ಚೀನಾಕ್ಕೆ ತನ್ನ ಮೊದಲ ಅಧಿಕೃತ ಭೇಟಿ ನೀಡಿದರು. ಸಂಪ್ರದಾಯದಂತೆ ಮಾಲ್ಡೀವ್ಸ್ನ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ನಂತರ ಭೇಟಿ ನೀಡುವ ಮೊದಲ ದೇಶ ಭಾರತ. ಆದರೆ ಮುಯಿಝ್ಝಯ ಆ ಸಂಪ್ರದಾಯ ಮುರಿದರು.

ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ RAWನ ಅಧಿಕಾರಿಗಳು ಜನವರಿ 2024 ರಲ್ಲಿ ಮಾಲ್ಡೀವ್ಸ್ನಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಮುಯಿಝ್ಝುವನ್ನು ದೋಷಾರೋಪಣೆ ಮಾಡುವ ಸಂಚಿನ ಬಗ್ಗೆ ಚರ್ಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮುಯಿಝು ಕುಟುಂಬದ ಅಪರಿಚಿತ ಸಲಹೆಗಾರರನ್ನು ಉಲ್ಲೇಖಿಸಿ, ವಾಷಿಂಗ್ಟನ್ನಲ್ಲಿ ನೆಲೆಸಿರುವ ಹಿರಿಯ ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ ಅಧಿಕಾರಿಯೊಬ್ಬರು ಇಬ್ಬರು ಭಾರತೀಯ ಮಧ್ಯವರ್ತಿಗಳೊಂದಿಗೆ ಮಾಲ್ಡೀವಿಯನ್ ಅಧ್ಯಕ್ಷರನ್ನು ಪದಚ್ಯುತಗೊಳಿಸುವ ಯೋಜನೆಯ ಕುರಿತು ಚರ್ಚಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಒಬ್ಬರು ಮಾಜಿ ಪೊಲೀಸ್ ಅಧಿಕಾರಿ ಶಿರಿಶ್ ಥೋರಟ್, ಇನ್ನೊಬ್ಬರು ಗೋವಾದ ಪ್ರಕಾಶಕ ಮತ್ತು ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರರಾದ ಸವಿಯೋ ರೋಡ್ರಿಗಸ್ ಎನ್ನಲಾಗಿದೆ. ಇಬ್ಬರೂ ಈ ಯೋಜನೆಯ ಕುರಿತು ವಾಷಿಂಗ್ಟನ್ ಪೋಸ್ಟ್ಗೆ ದೃಢಪಡಿಸಿದ್ದಾರೆ. ಈ ಯೋಜನೆಯನ್ನು ಭಾರತ ಸರ್ಕಾರವು ಅನುಮೋದಿಸಿದೆಯೇ ಎಂದು ಅವರು ಸ್ಪಷ್ಟಪಡಿಸಲಿಲ್ಲ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವರದಿಯ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಲ್ದೀವ್ಸ್ ನ ಮಾಜಿ ಅಧ್ಯಕ್ಷ ನಶೀದ್ ಸೋಮವಾರ "ಅಧ್ಯಕ್ಷರ ವಿರುದ್ಧ ಯಾವುದೇ ಗಂಭೀರ ಪಿತೂರಿಯ ಬಗ್ಗೆ ತಿಳಿದಿಲ್ಲ" ಎಂದು ಹೇಳಿದ್ದಾರೆ.

"ಭಾರತವು ಅಂತಹ ಕ್ರಮವನ್ನು ಎಂದಿಗೂ ಬೆಂಬಲಿಸುವುದಿಲ್ಲ, ಏಕೆಂದರೆ ಅವರು ಯಾವಾಗಲೂ ಮಾಲ್ಡೀವ್ಸ್ನ ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತಾರೆ" ಎಂದು ನಶೀದ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

ಕೃಪೆ : scroll.in

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News