ಫೆಲೆಸ್ತೀನ್ ಬಿಕ್ಕಟ್ಟು ಪರಿಹಾರಕ್ಕೆ ದ್ವಿರಾಷ್ಟ್ರ ಸಿದ್ಧಾಂತ ನಿಲುವಿಗೆ ಭಾರತ ಬದ್ಧ : ರಾಜ್ಯಸಭೆಯಲ್ಲಿ ಜೈಶಂಕರ್
ಹೊಸದಿಲ್ಲಿ : ಸನ್ನಿವೇಶಗಳಿಗೆ ತಕ್ಕಂತೆ ಪ್ರತಿಕ್ರಿಯಿಸುವ ಹಕ್ಕನ್ನು ದೇಶಗಳು ಹೊಂದಿರುತ್ತವೆ. ಆದರೆ ಅಂತಹ ಸಂದರ್ಭದಲ್ಲಿ ಸಂಭವಿಸಬಹುದಾದ ನಾಗರಿಕ ಸಾವು ನೋವುಗಳ ಬಗ್ಗೆ ಅವು ಎಚ್ಚರವಹಿಸಬೇಕು ಹಾಗೂ ಮಾನವೀಯ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ. ಫೆಲೆಸ್ತೀನ್ ಬಿಕ್ಕಟ್ಟು ಇತ್ಯರ್ಥಕ್ಕೆ ‘ದ್ವಿರಾಷ್ಟ್ರ ಸಿದ್ದಾಂತ’ವೇ ಪರಿಹಾರ ಎಂಬ ನಿಲುವಿಗೆ ಭಾರತ ಈಗಲೂ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಹಾಗೂ ಫೆಲೆಸ್ತೀನ್ ಹೋರಾಟಗಾರರ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷಕ್ಕೆ ಸಂಬಂಧಿಸಿ ಭಾರತದ ನಿಲುವಿನ ಕುರಿತಾಗಿ ಕೇಳಲಾದ ಪೂರಕ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಫೆಲೆಸ್ತೀನ್ ನಾಗರಿಕರ ರಕ್ಷಣೆ ಹಾಗೂ ಕಾನೂನು ಮತ್ತು ಮಾನವೀಯ ಬಾಧ್ಯತೆಗಳನ್ನು ಎತ್ತಿಹಿಡಿಯುವ ಕುರಿತಾಗಿ 2023ರ ಅಕ್ಟೋಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ನಿರ್ಣಯ ಮಂಡನೆ ಸಂದರ್ಭ ಭಾರತವು ಗೈರುಹಾಜರಾದ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದರು. ‘‘ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಹಲವಾರು ನಿರ್ಣಯಗಳನ್ನು ಮಂಡಿಸಲಾಗುತ್ತದೆ. ಕೆಲವು ನಿರ್ಣಯಗಳನ್ನು ಮತದಾನಕ್ಕೆ ಹಾಕಿದ ಸಂದರ್ಭ ಭಾರತವು ಹಾಜರಾಗಿದ್ದರೆ, ಇನ್ನು ಕೆಲವು ನಿರ್ಣಯಗಳಿಗೆ ಗೈರುಹಾಜರಾಗಿದೆ’’ ಎಂದರು.
ನಿರ್ಣಯದ ಕುರಿತ ಮತದಾನದ ವೇಳೆ ಗೈರುಹಾಜರಾಗುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಒಂದು ವೇಳೆ ನಿರ್ಣಯವು ಸಂತುಲಿತವಾಗಿರದಿದ್ದಲ್ಲಿ ಮತ್ತು ಹೆಚ್ಚು ವಿಭಜನಾತ್ಮಕವಾಗಿದ್ದಲ್ಲಿ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಭಾರತವು ಮತದಾನಕ್ಕೆ ಗೈರುಹಾಜರಾಗಿತ್ತು ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ನೆರವು ಏಜೆನ್ಸಿ ‘ಯುಎನ್‌ಆರ್‌ಡಬ್ಲ್ಯುಎ’ದ ಮೇಲೆ ಇಸ್ರೇಲ್ ಸರಕಾರವು ನಿಷೇಧ ವಿಧಿಸಿರುವುದರ ಕುರಿತು ಭಾರತದ ನಿಲುವೇನು ಹಾಗೂ ಫೆಲೆಸ್ತೀನ್‌ಗೆ ನೆರವು ಕಳುಹಿಸಲು ಭಾರತಕ್ಕೆ ಹೇಗೆ ಸಾಧ್ಯವಾಗುತ್ತಿದೆ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಅವರ ಪ್ರಶ್ನೆಗೆ ಜೈಶಂಕರ್ ಹೀಗೆ ಉತ್ತರಿಸಿದರು. ಗಾಝಾಗೆ ಮಾನವೀಯ ನೆರವನ್ನು ಕಳುಹಿಸುವ ತನ್ನ ನಿರ್ಧಾರಕ್ಕೆ ಕೇಂದ್ರ ಸರಕಾರ ಬದ್ಧವಾಗಿದೆ ಹಾಗೂ ಯುಎನ್‌ಆರ್‌ಡಬ್ಲ್ಯುಎಗೆ ನೆರವು ಸಾಮಾಗ್ರಿಗಳನ್ನು ಪೂರೈಕೆ ಮಾಡಿರುವುದಾಗಿ ವಿದೇಶಾಂಗ ಸಚಿವರು ಸದನಕ್ಕೆ ತಿಳಿಸಿದರು.
ಭಾರತದವು ಇಸ್ರೇಲ್-ಫೆಲೆಸ್ತೀನ್ ಕುರಿತು ದ್ವಿರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸುತ್ತಾ ಬಂದಿದ್ದರೂ, ಪಶ್ಚಿಮದಂಡೆಯಲ್ಲಿ ಇಸ್ರೇಲ್‌ನ ಅಕ್ರಮ ವಸಾಹತಿನ ವಿರುದ್ಧ ನಿರ್ಣಯಕ್ಕೆ ಅದು ಯಾಕೆ ಗೈರುಹಾಜರಾಗಿತ್ತೆಂಬುದಾಗಿಯೂ ಗೋಖಲೆ ಪ್ರಶ್ನಿಸಿದ್ದರು.
ಜೈಶಂಕರ್ ಅವರು ಇದಕ್ಕುತ್ತರಿಸುತ್ತಾ, ‘‘ಫೆಲೆಸ್ತೀನ್ ಬಿಕ್ಕಟ್ಟಿನ ಪರಿಹಾರಕ್ಕೆ ‘ದ್ವಿರಾಷ್ಟ್ರ’ ಸಿದ್ಧಾಂತವನ್ನು ನಾವು ಬೆಂಬಲಿಸುತ್ತಾ ಬಂದಿದ್ದೇವೆ. ಈ ವಿಷಯದಲ್ಲಿ ಭಾರತವು ಬಹಿರಂಗವಾದ ನಿಲುವನ್ನು ಹೊಂದಿದೆ. ದ್ವಿರಾಷ್ಟ್ರ ಸಿದ್ಧಾಂತ ಕುರಿತ ವಿಷಯದಲ್ಲಿ ಭಾರತದ ನಿಲುವಿನ ಬಗ್ಗೆ ಯಾವುದೇ ಗೊಂದಲವಿಲ್ಲ’’ ಎಂದು ಹೇಳಿದರು.
2023ರ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಂಡಿಸಲಾದ ನಿರ್ಮಯದಲ್ಲಿ ಭಯೋತ್ಪಾದನೆ ಅಥವಾ ಒತ್ತೆಯಾಳುಗಳ ಸೆರೆ ಬಗ್ಗೆಯಾವುದೇ ಪ್ರಸ್ತಾವನೆ ಇರಲಿಲ್ಲ. ಈ ನಿರ್ಣಯವು ಒಟ್ಟಾರೆ ಪರಿಸ್ಥಿತಿಯನ್ನು ಪ್ರತಿಫಲಿಸಿರಲಿಲ್ಲ ಹಾಗೂ ಅದು ಸಂತುಲಿತ ನಿರ್ಣಯವಾಗಿರಲಿಲ್ಲವೆಂಬುದು ಭಾರತಕ್ಕೆ ಮನದಟ್ಟಾಗಿತ್ತು ಎಂದರು.
ಭಾರತವು ಸ್ವತಃ ಭಯೋತ್ಪಾದನೆಯಿಂದ ಸಂತ್ರಸ್ತರಾಷ್ಟ್ರವಾಗಿದ್ದು, ಒಂದು ವೇಳೆ ಭಯೋತ್ಪಾದನೆಯ ವಿಷಯವನ್ನು ಕ್ಷುಲ್ಲಕಗೊಳಿಸಿದಲ್ಲಿ ಅಥವಾ ಕಡೆಗಣಿಸಿದಲ್ಲಿ, ಅದು ನಮ್ಮ ಹಿತಾಸಕ್ತಿಗೆ ಅನುಗುಣವಾಗಿರುವುದಿಲ್ಲವೆಂದು ಜೈಂಕರ್ ಹೇಳಿದರು.
ಗಾಝಾದಲ್ಲಿ ಯುದ್ಧಪರಾಧಗಳಿಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು, ಇಸ್ರೇಲ್ ಮಾಜಿ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಹಾಗೂ ಹಮಾಸ್ ನಾಯಕರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿರುವ ಬಗ್ಗೆ ಭಾರತದ ನಿಲುವೇನು ಎಂಬ ಪ್ರಶ್ನೆಗೆ ಅವರು, ಭಾರತವು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಸದಸ್ಯನಲ್ಲ ಎಂದು ಹೇಳಿದರು.
►ಭಾರತದಿಂದ ವಿಶ್ವಸಂಸ್ಥೆ ಏಜೆನ್ಸಿ ಮೂಲಕ ಫೆಲೆಸ್ತೀನ್‌ಗೆ 50 ಲಕ್ಷ ಡಾಲರ್ ನೆರವು
ಇಸ್ರೇಲ್ ದಾಳಿಯ ಬಳಿಕ ಫೆಲೆಸ್ತೀನ್‌ಗೆ ಭಾರತವು ಯುಎನ್‌ಆರ್‌ಡಬ್ಲ್ಯುಎ ಮೂಲಕ 5 ದಶಲಕ್ಷ ಅಮೆರಿಕನ್ ಡಾಲರ್ ವಾರ್ಷಿಕ ನೆರವನ್ನು ನೀಡಿದೆಯೆಂದು ಹೇಳಿದರು. ಇಂತಹ ಸನ್ನಿವೇಶಗಳಿಗೆ ಸಾಮಾನ್ಯವಾಗಿ 10 ಲಕ್ಷ ಡಾಲರ್‌ವರೆಗೆ ನೆರವನ್ನು ನೀಲಾಗುತ್ತಿತ್ತು. ಆದರೆ ಅದನ್ನು ಭಾರತವು ಅದನ್ನು 50 ಲಕ್ಷ ಡಾಲರ್‌ಗೆ ಏರಿಸಿದೆ ಎಂದರು.
ಯುನ್‌ಆರ್‌ಡಬ್ಲ್ಯುಎ ಮೂಲಕ 2024ರಲ್ಲಿ ಭಾರತವು ಫೆಲೆಸ್ತೀನ್ ಪ್ರಾಧಿಕಾರಕ್ಕೆ 65 ಮೆಟ್ರಿಕ್ ಟನ್ ಔಷಧಿಗಳನ್ನು ಪೂರೈಕೆ ಮಾಡಡಿತ್ತು. ಲೆಬನಾನ್‌ಗೂ 33 ಮೆಟ್ರಿಕ್ ಔಷಧಿ ಪೂರೈಸಿತ್ತು ಎಂದರು.
‘‘ನಾವು ಭಯೋತ್ಪಾದನೆಯನ್ನು, ಒತ್ತೆಸೆರೆಯನ್ನು ಖಂಡಿಸುತ್ತೇವೆ. ದೇಶಗಳು ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಹೊಂದಿರುತ್ತವೆ. ಆದರೆ ಅದೇ ವೇಳೆ ಸಂಭಾವ್ಯ ಸಾವುನೋವುಗಳ ಬಗ್ಗೆ ಅವು ಎಚ್ಚರದಿಂದಿರಬೇಕು. ಅವು ಮಾನವೀಯ ಕಾನೂನನ್ನು ಪಾಲಿಸಬೇಕಾಗುತ್ತದೆ. ಫೆಲೆಸ್ತೀನ್‌ನಲ್ಲಿ ಕದನವಿರಾಮ ಏರ್ಪಡಲು ಹಾಗೂ ಹಿಂಸಾಚಾರ ಅಂತ್ಯಗೊಳ್ಳುವುದನ್ನು ಭಾರತ ಬಯಸುತ್ತದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದರು.