ನಿಖಿಲ್ ಗುಪ್ತಾಗೆ 3 ಬಾರಿ ಕಾನ್ಸುಲಾರ್ ಪ್ರವೇಶ ಒದಗಿಸಲಾಗಿದೆ: ಕೇಂದ್ರ ಸರ್ಕಾರ
ಹೊಸದಿಲ್ಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿಯೊಬ್ಬನನ್ನು ನ್ಯೂಯಾರ್ಕ್‌ನಲ್ಲಿ ಹತ್ಯೆಗೈಯ್ಯಲು ಸಂಚು ಹೂಡಿದ ಆರೋಪ ಎದುರಿಸುತ್ತಿರುವ ಭಾರತೀಯ ನಾಗರಿಕನಿಗೆ ಭಾರತ ಮೂರು ಸಂದರ್ಭಗಳಲ್ಲಿ ಕಾನ್ಸುಲಾರ್ ಪ್ರವೇಶ ಒದಗಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಆರೋಪಿ, ನಿಖಿಲ್ ಗುಪ್ತಾ (52) ಪ್ರಸ್ತತ ಝೆಕ್ ಗಣರಾಜ್ಯದ ರಾಜಧಾನಿ ಪ್ರಾಗ್‌ನಲ್ಲಿ ಬಂಧನದಲ್ಲಿದ್ದು ಆತನನ್ನು ಗಡೀಪಾರುಗೊಳಿಸುವಂತೆ ಕೋರಿ ಝೆಕ್ ಅಧಿಕಾರಿಗಳಿಗೆ ಅಮೆರಿಕಾ ಮನವಿ ಮಾಡಿದೆ.
ಗುಪ್ತಾಗೆ ಅಗತ್ಯ ಕಾನ್ಸುಲಾರ್ ಸಹಾಯವನ್ನು ಭಾರತ ಒದಗಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
“ಈ ವ್ಯಕ್ತಿಯ ಕುಟುಂಬದ ಸದಸ್ಯರೊಬ್ಬರು ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿರುವುದರಿಂದ ಈ ಸಂದರ್ಭ ಈ ವಿಚಾರದಲ್ಲಿ ಹೇಳಿಕೆ ನೀಡುವುದು ಸರಿಯಾಗದು,” ಎಂದು ಅವರು ಹೇಳಿದರು.
ನಿಖಿಲ್ ಗುಪ್ತಾ ಗಡೀಪಾರು ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಸ್ತಕ್ಷೇಪ ನಡೆಸುವಂತೆ ಭಾರತ ಸರ್ಕಾರಕ್ಕೆ ಸೂಚಿಸಬೇಕೆಂದು ಕೋರಿ ಗುಪ್ತಾ ಕುಟುಂಬದ ಸದಸ್ಯರು ಸುಪ್ರೀಂ ಕೋರ್ಟ್ಟ ಕದ ತಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ವಿಚಾರಣೆಯನ್ನು ಜನವರಿ 4ಕ್ಕೆ ನಿಗದಿಪಡಿಸಿರುವ ಸುಪ್ರೀಂ ಕೋರ್ಟ್ ಗುಪ್ತಾ ಕುಟುಂಬಕ್ಕೆ ಝೆಕ್ ನ್ಯಾಯಾಲಯಕ್ಕೆ ಮನವಿ ಮಾಡುವಂತೆ ಡಿಸೆಂಬರ್ 15ರ ವಿಚಾರಣೆ ವೇಳೆ ಹೇಳಿದೆ.
ಈ ವಿಚಾರದಲ್ಲಿ ಭಾರತದ ಯಾವುದೇ ನ್ಯಾಯಾಂಗ ಪ್ರಾಧಿಕಾರಗಳಿಗೆ ಯಾವುದೇ ಅಧಿಕಾರವಿಲ್ಲ, ಈ ಪ್ರಕರಣವು ಝೆಕ್ ಗಣರಾಜ್ಯದ ಸಂಬಂಧಿತ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯಲ್ಲಿದೆ, ಎಂದು ಝೆಕ್ ನ್ಯಾಯ ಸಚಿವಾಲಯದ ವಕ್ತಾರ ವ್ಲಾದಿಮಿರ್ ರೆಪ್ಕಾ ಹೇಳಿದ್ದಾರೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂಗ್ ಸಿಂಗ್ ಪನ್ನುನ್‌ನನ್ನು ಹತ್ಯೆಗೈಯ್ಯಲು ಭಾರತ ಸರ್ಕಾರದ ಉದ್ಯೋಗಿಯೊಬ್ಬರೊಂದಿಗೆ ಸೇರಿಕೊಂಡು ಹಂತಕನನ್ನು ಬಾಡಿಗೆಗೆ ಪಡೆಯಲು ಯತ್ನಿಸುತ್ತಿರುವ ಆರೋಪವನ್ನು 52 ವರ್ಷದ ನಿಖಿಲ್ ಗುಪ್ತಾ ಎದುರಿಸುತ್ತಿದ್ದಾರೆ.