ಇತಿಹಾಸ ನನ್ನ ಬಗ್ಗೆ ದಯಾಮಯಿಯಾಗಲಿದೆ: ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಡಾ.ಮನಮೋಹನ್ ಸಿಂಗ್

Update: 2024-12-27 03:35 GMT

PC: x.com/swaris16

ಹೊಸದಿಲ್ಲಿ: ಜನವರಿ 3, 2014 ರಂದು ಪ್ರಧಾನಿಯಾಗಿ ನಡೆಸಿದ ತಮ್ಮ ಕೊನೆಯ ಪತ್ರಿಕಾಗೋಷ್ಠಿಯಲ್ಲಿ, ಡಾ.ಮನಮೋಹನ್ ಸಿಂಗ್ ಅವರು ನೀಡಿದ್ದ ಹೇಳಿಕೆಯು ಕಳೆದ ಒಂದು ದಶಕದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಮ್ಮ ಸಂಪುಟ ಸದಸ್ಯರಿಗೆ ಲಗಾಮು ಹಾಕುವಲ್ಲಿ ವಿಫಲರಾದ ಬಗ್ಗೆ ಮತ್ತು ಹಲವು ಪರಿಸ್ಥಿತಿಗಳಲ್ಲಿ ಕ್ರಮ ಕೈಗೊಳ್ಳಲು ಅಸಮರ್ಥರಾದ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ನಸುನಗುತ್ತಾ ಉತ್ತರಿಸಿದ ಸಿಂಗ್, "ಪ್ರಸ್ತುತ ಇರುವ ಮಾಧ್ಯಮಗಳಿಗಿಂತ ಅಥವಾ ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗಿಂತ ಇತಿಹಾಸ ನನ್ನ ಬಗ್ಗೆ ದಯಾಳುವಾಗಿರುತ್ತದೆ ಎನ್ನುವುದು ನನ್ನ ಪ್ರಾಮಾಣಿಕ ನಂಬಿಕೆ" ಎಂದು ಹೇಳಿದ್ದರು.

"ನನ್ನ ಸರ್ಕಾರದ ಸಂಪುಟ ವ್ಯವಸ್ಥೆಯ ಎಲ್ಲ ಅಂಶಗಳನ್ನು ನಾನು ಬಹಿರಂಗಪಡಿಸಲಾಗದು. ಪರಿಸ್ಥಿತಿಗಳಿಗೆ ಅನುಸಾರವಾಗಿ ಮತ್ತು ಮೈತ್ರಿ ರಾಜಕಾರಣದ ಬದ್ಧತೆಗಳಿಗೆ ಅನುಗುಣವಾಗಿ ಆ ಪರಿಸ್ಥಿತಿಗಳಲ್ಲಿ ನಾನು ಅತ್ಯುತ್ತಮವಾಗಿ ಏನು ಮಾಡಬಹುದೋ ಅದನ್ನು ಮಾಡಿದ್ದೇನೆ" ಎಂದು ಸ್ಪಷ್ಟಪಡಿಸಿದ್ದರು.

ಯುಪಿಎ-2 ಸರ್ಕಾರ ಹಾಗೂ ಹಲವು ಸಚಿವರು ಭ್ರಷ್ಟಾಚಾರದ ಆರೋಪದ ಸುಳಿಯಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನಾಮಾವಶೇಷವಾಗಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ವಯೋಸಂಬಂಧಿ ಆರೋಗ್ಯ ಸಮಸ್ಯೆಗಳಿಂದಾಗಿ ಅಲ್ಪಕಾಲದಿಂದ ಅಸ್ವಸ್ಥರಾಗಿದ್ದ 92 ವರ್ಷ ವಯಸ್ಸಿನ ಮಾಜಿ ಪ್ರಧಾನಿ ಡಾ.ಸಿಂಗ್ ಅವರು ಗುರುವಾರ ಕೊನೆಯುಸಿರೆಳೆದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News