2020ರ ಪರಿಸ್ಥಿತಿ ಮರಳಿದ ಬಳಿಕ ಲಡಾಖ್‌ನಿಂದ ಸೇನಾ ವಾಪಸಾತಿ : ಭಾರತೀಯ ಸೇನಾ ಮುಖ್ಯಸ್ಥ

Update: 2024-10-22 14:45 GMT

ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ | PTI  

ಹೊಸದಿಲ್ಲಿ : ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ ಪರಿಸ್ಥಿತಿಯು 2020ರ ಎಪ್ರಿಲ್‌ನಲ್ಲಿ ಇದ್ದ ಪರಿಸ್ಥಿತಿಗೆ ಮರಳಿದ ಬಳಿಕವಷ್ಟೇ ಅಲ್ಲಿಂದ ಭಾರತೀಯ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ನಾಲ್ಕು ವರ್ಷಗಳಿಗೂ ಅಧಿಕ ಕಾಲ ಉದ್ವಿಗ್ನತೆ ನೆಲೆಸಿದ ಬಳಿಕ, ಸೇನಾ ವಾಪಸಾತಿಯ ಬಗ್ಗೆ ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿವೆ ಎಂಬುದಾಗಿ ವಿದೇಶ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದ ಒಂದು ದಿನದ ಬಳಿಕ ಸೇನಾ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ.

ಚೀನಾ ಸೇನೆಯು ತನ್ನ ಆಕ್ರಮಣಕಾರಿ ಚಟುವಟಿಕೆಗಳ ಮೂಲಕ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸಿತ್ತು ಎಂದು ಹೇಳಿದ ಜನರಲ್ ದ್ವಿವೇದಿ, ಚೀನಾ ಜೊತೆಗಿನ ವಿಶ್ವಾಸವನ್ನು ಮರುಸ್ಥಾಪಿಸಲು ಭಾರತೀಯ ಪಡೆಗಳು ಈಗ ಯತ್ನಿಸುತ್ತಿವೆ ಎಂದು ಹೇಳಿದರು.

‘‘ನಾವು 2020 ಎಪ್ರಿಲ್‌ನಲ್ಲಿ ಇದ್ದ ಪರಿಸ್ಥಿತಿ ನೆಲೆಸಬೇಕೆಂದು ಬಯಸಿದ್ದೇವೆ. ಬಳಿಕವಷ್ಟೇ ಸೇನಾ ವಾಪಸಾತಿ, ಉದ್ವಿಗ್ನತೆ ಶಮನ ಮತ್ತು ಎಲ್‌ಎಸಿಯ ಸಾಮಾನ್ಯ ನಿರ್ವಹಣೆಯ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ. ಈಗ, ನಾವು ವಿಶ್ವಾಸ ಮರುಸ್ಥಾಪನೆಗೆ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾವು ಒಬ್ಬರನ್ನೊಬ್ಬರು ನೋಡಿದ ಬಳಿಕ ಮತ್ತು ಶಾಂತ ವಲಯಗಳಿಗೆ ನುಸುಳುವುದಿಲ್ಲ ಎನ್ನುವುದನ್ನು ಪರಸ್ಪರರಿಗೆ ಮನವರಿಕೆ ಮಾಡಲು ನಮಗೆ ಸಾಧ್ಯವಾದ ಬಳಿಕ ವಿಶ್ವಾಸ ಮರುಸ್ಥಾಪನೆಯಾಗಲಿದೆ’’ ಎಂದು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.

ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೆ ಗಸ್ತು ನಡೆಸುವ ವಿಷಯದಲ್ಲಿ ಭಾರತ ಮತ್ತು ಚೀನಾ ಒಪ್ಪಂದವೊಂದಕ್ಕೆ ಬಂದಿವೆ ಎಂದು ವಿದೇಶ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸೋಮವಾರ ಹೇಳಿದ್ದರು.

ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿಯು 2020ರ ಮೇ ತಿಂಗಳಿನ ಮೊದಲು ಇದ್ದ ಸ್ಥಿತಿಗೆ ಮರಳಿದೆ ಎಂದು ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕೂಡ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News