ಹಿಂದೂ ದೇವತೆಯನ್ನು ಬಿಂಬಿಸುವ ಎನ್‌ಎಂಸಿ ಲಾಂಛನಕ್ಕೆ ಭಾರತೀಯ ವೈದ್ಯಕೀಯ ಸಂಘ ಆಕ್ಷೇಪ; ಧರ್ಮ ತಟಸ್ಥತೆಗೆ ಆಗ್ರಹ

Update: 2023-12-04 12:46 GMT

ಹೊಸದಿಲ್ಲಿ: ಹಿಂದು ದೇವತೆ ಧನ್ವಂತರಿಯನ್ನು ಬಿಂಬಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ದ ಲಾಂಛನಕ್ಕೆ ರವಿವಾರ ಆಕ್ಷೇಪವನ್ನು ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು,ಧರ್ಮ ತಟಸ್ಥ ಲಾಂಛನವನ್ನು ಅಳವಡಿಸಿಕೊಳ್ಳುವಂತೆ ಅದಕ್ಕೆ ಆಗ್ರಹಿಸಿದೆ.

ಹಿಂದು ಪುರಾಣಗಳ ಪ್ರಕಾರ ಧನ್ವಂತರಿ ದೇವತೆಗಳ ವೈದ್ಯ. ಎನ್‌ಎಂಸಿ ಗುರುವಾರ ಐಎಂಎ ಕೇರಳ ಘಟಕದಿಂದ ಆಕ್ರೋಶವನ್ನು ಎದುರಿಸಿತ್ತು. ಲಾಂಛನದಲ್ಲಿ ಇತ್ತೀಚಿನ ಬದಲಾವಣೆಯು ಸ್ವೀಕಾರಾರ್ಹವಲ್ಲ ಎಂದು ಐಎಂಎ ಕೇರಳ ಘಟಕವು ಹೇಳಿತ್ತು. ಲಾಂಛನದಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ ’ವನ್ನು ಬಳಸಿದ್ದಕ್ಕಾಗಿಯೂ ಎನ್‌ಎಂಸಿ ಆಕ್ರೋಶಕ್ಕೆ ತುತ್ತಾಗಿದೆ.

ಆದಾಗ್ಯೂ ಎನ್‌ಎಂಸಿ,ಈ ಲಾಂಛನವು ಒಂದು ವರ್ಷಕ್ಕೂ ಅಧಿಕ ಸಮಯದಿಂದ ಬಳಕೆಯಲ್ಲಿದೆ ಎಂದು ಹೇಳಿದೆ.

‘ಎನ್‌ಎಂಸಿ ಧಾರ್ಮಿಕ ಚಿತ್ರಣ ಹೊಂದಿರುವ ಲಾಂಛನವನ್ನು ಅಳವಡಿಸಿಕೊಂಡಿದೆ. ಈ ನೂತನ ಲಾಂಛನವು ವೈದ್ಯರಾಗಿ ನಮ್ಮ ಮೂಲಭೂತ ಮೌಲ್ಯಗಳಿಗೆ ವಿರುದ್ಧವಾಗಿದೆ. ವೈದ್ಯರ ಪ್ರಮಾಣವಚನ ಮತ್ತು ಕರ್ತವ್ಯಕ್ಕೆ ಅನುಗುಣವಾಗಿಲ್ಲ,ಇವು ಯಾವುದೇ ನಿರ್ದಿಷ್ಟ ಧರ್ಮದತ್ತ ಒಲವು ಹೊಂದಿಲ್ಲ. ಇಂತಹ ಲಾಂಛನವನ್ನು ಹೊಂದಿರುವುದು ಎನ್‌ಎಂಸಿಯಂತಹ ಸಂಸ್ಥೆಯ ಘನತೆ ಮತ್ತು ಔಚಿತ್ಯಕ್ಕೆ ತಕ್ಕದ್ದಲ್ಲ’ ಎಂದು ಐಎಂಎ ರವಿವಾರ ಹೇಳಿದೆ.

ಯಾವುದೇ ರಾಷ್ಟ್ರೀಯ ಸಂಸ್ಥೆಯ ಲಾಂಛನವು ಎಲ್ಲ ನಾಗರಿಕರ ಆಕಾಂಕ್ಷೆಗಳನ್ನು ಸಮಾನ ರೀತಿಯಲ್ಲಿ ಅಭಿವ್ಯಕ್ತಿಸಬೇಕು ಮತ್ತು ಎಲ್ಲ ವಿಷಯಗಳಲ್ಲಿ ತಟಸ್ಥವಾಗುಳಿಯುವ ಮೂಲಕ ಸಮಾಜದ ಯಾವುದೇ ಭಾಗ/ವರ್ಗವು ನೊಂದುಕೊಳ್ಳುವ ಸಾಧ್ಯತೆಯನ್ನು ನಿವಾರಿಸಬೇಕು ಎಂದು ಹೇಳಿರುವ ಐಎಂಎ,ಎನ್‌ಎಂಸಿಯು ವೈದ್ಯರ ಪ್ರಮಾಣ ವಚನ ಮತ್ತು ಕರ್ತವ್ಯಕ್ಕೆ ವಿರುದ್ಧವಲ್ಲದ ಲಾಂಛನವನ್ನು ಅಳವಡಿಸಿಕೊಳ್ಳಲು ತಿದ್ದುಪಡಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದೆ.

ಈ ಮೊದಲು ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ನೈತಿಕತೆ ಮತ್ತು ವೈದ್ಯಕೀಯ ನೋಂದಣಿ ಮಂಡಳಿಯ ಸದಸ್ಯ ಹಾಗೂ ಎನ್‌ಎಂಸಿಯ ಮಾಧ್ಯಮ ವಿಭಾಗದ ಮುಖ್ಯಸ್ಥ ಡಾ.ಯೋಗೇಂದ್ರ ಮಲಿಕ್ ಅವರು, ‘‘ನಾವೆಂದೂ ‘ಭಾರತ ’ ಲಾಂಛನವನ್ನು ನಮ್ಮ ಲಾಂಛನವನ್ನಾಗಿ ಹೊಂದಿರಲಿಲ್ಲ. ಅಸಲಿಗೆ ನಾವು ಮೊದಲು ಲಾಂಛನವನ್ನೇ ಹೊಂದಿರಲಿಲ್ಲ. ಒಂದು ವರ್ಷದ ಹಿಂದಷ್ಟೇ ಸಲಹೆಗಳನ್ನು ಪರಿಗಣಿಸಿ ಲಾಂಛನವನ್ನು ನಾವು ಅಳವಡಿಸಿಕೊಂಡಿದ್ದೇವೆ. ಆಗಿನಿಂದಲೂ ಧನ್ವಂತರಿ ಲಾಂಛನವು ಕಪ್ಪು-ಬಿಳುಪಿನಲ್ಲತ್ತು,ಅದನ್ನು ಈಗ ಬಣ್ಣದಲ್ಲಿ ಮೂಡಿಸಲಾಗಿದೆ. ಅದೊಂದೇ ಬದಲಾವಣೆಯನ್ನು ಮಾಡಲಾಗಿದೆ. ಈ ಟೀಕೆಗಳು ಏಕೆ ಎನ್ನುವುದು ನನಗೆ ಅರ್ಥವಾಗಿಲ್ಲ’’ ಎಂದು ಹೇಳಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News